ಮೂಲ್ಕಿ: ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವದ ಕೋಲದಲ್ಲಿ ದೈವ ನರ್ತನ ಮಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡು ಮಂಗಳೂರಿನ ಪ್ರಸಿದ್ದ ದೈವ ನರ್ತಕರೊಬ್ಬರು ಮೃತಪಟ್ಟಿದ್ದಾರೆ.
ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ (47) ಮೃತರು. ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ರಕ್ತೇಶ್ವರಿ ದೈವದ ಕೋಲ ಏರ್ಪಡಿಸಲಾಗಿತ್ತು. ಅಶೋಕ ಬಂಗೇರ ಅವರು ರಕ್ತೇಶ್ವರಿ ದೈವದ ವೇಷ, ತಲೆಪಟ್ಟಿ ಧರಿಸಿ ಸಜ್ಜಾಗಿದ್ದರು. ಗಗ್ಗರ ಸ್ವೀಕರಿಸುವ ಸಂಪ್ರದಾಯವೂ ನೆರವೇರಿತ್ತು. ಬಳಿಕ ದೈವದ ಗುಡಿಗೆ ಪ್ರದಕ್ಷಿಣೆ ಹಾಕಿ ದೈವ ನರ್ತನ ಆರಂಭಿಸಿದ ಕೆಲ ಹೊತ್ತಿನಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.
ತಕ್ಷಣವೇ ಈ ಬಗ್ಗೆ ಬಂಧುಗಳಿಗೆ ತಿಳಿಸಿದ್ದರು. ಕೂಡಲೇ ಗಗ್ಗರವನ್ನು ಹಿಂದಕ್ಕೆ ಒಪ್ಪಿಸಿ, ವೇಷ ಕಳಚಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು. ಕೋಲವನ್ನು ಅವರ ಬಂಧುವೊಬ್ಬರು ಪೂರ್ಣಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ದೈವಾರಾಧಕರಾಗಿದ್ದರು. ಜಿಲ್ಲೆಯಲ್ಲಿ ದೈವ ನರ್ತನಕ್ಕೆ ಹೆಸರುವಾಸಿಯಾಗಿದ್ದರು. ಮೃತರಿಗೆ ತಾಯಿ, ಭಟ್ರಕುಮೇರು ಕೊರಗತನಿಯ ಕ್ಷೇತ್ರದ ದೈವಾರಾಧಕ ಭಾಸ್ಕರ್ ಬಂಗೇರ ಸೇರಿದಂತೆ ಐವರು ಸಹೋದರರು, ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post