ಮಂಗಳೂರು: ‘ಕ್ರೀಡೆಯಲ್ಲಿ ಸೋಲು– ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳುವುದು ಅತಿ ಮುಖ್ಯ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದರು.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಕ್ರೀಡಾ ಭಾವನೆ ಬೆಳೆಸುವುದಕ್ಕೆ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆ ಇಂತಹ ಉತ್ತಮ ವೇದಿಕೆ ಒದಗಿಸಿದೆ. ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶ ಪಡೆಯುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ. ಜಿಲ್ಲೆಯ ಹಲವು ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ತಮ್ಮದೆ ಆದಂತಹ ಛಾಪು ಮೂಡಿಸುತ್ತಿರುವುದು ಉಳಿದವರಿಗೆ ಪ್ರೇರೇಪಣೆ ಆಗಿದೆ ಎಂದು ಹೇಳಿದರು.
ಕ್ರೀಡೆ ಪದಕ, ಪ್ರಶಸ್ತಿ ಗಳಿಸುವುದಕ್ಕೆ ಮಾತ್ ಸಿಮೀತವಲ್ಲ. ದೈಹಿಕ ಹಾಗೂ ಮಾನಸಿಕ ಸದೃಢತೆ ಕಂಡುಕೊಳ್ಳಲು ಉತ್ತಮ ವೇದಿಕೆ. ಮಹಿಳೆಯರನ್ನು ಸಮಾಜಮುಖಿಯಾಗಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಇದ್ದು, ಕ್ರೀಡೆಯಲ್ಲಿ ಗಟ್ಟಿಯಾದ ಸ್ಥಾನ ಪಡೆಯಲು ಸತತ ಪ್ರಯತ್ನ ಕೂಡ ಮುಖ್ಯ, ಇದನ್ನು ಸಾಧಿಸುವ ಮನಸ್ಸು ಎಲ್ಲರಲ್ಲಿ ಬೆಳೆಯಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಜೀವನದಲ್ಲಿ ಗುರಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ಜೋತಿರ್ಲಿಂಗ ಹೊನಕಟ್ಟಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದ್ದು, ಜನಪದ ಸಾಹಿತ್ಯದ ಆರಂಭ ಕೂಡ ಮಹಿಳೆಯರಿಂದಲೇ ಶುರು ಆಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಗಟ್ಟಿ ಸ್ಥಾನವನ್ನು ಪಡೆಯುತ್ತಿರುವುದು ನಮಗೆಲ್ಲ ಹೆಮ್ಮೆ. ಸಾಕಷ್ಟು ಮಹಿಳೆಯರು ಒಲಿಂಪಿಯನ್‌ಗಳಾಗಿ ಕೂಡ ಹೊರಹೊಮ್ಮುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ತಮ್ಮದೆ ಆದಂತಹ ಕ್ರೀಡಾ ಸಾಮರ್ಥ್ಯವನ್ನು ಮೆರೆಯುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಮೆರುಗು ತಂದಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 200 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯಿತಿ ಲೋಕ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕಿ ಭಾಗೀರಥಿ ರೈ ಅವರು ಶಾಟಪಟ್ ಥ್ರೋ ಹಾಗೂ ಡಿಸ್ಕಸ್ ಥ್ರೋನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರು. ಚಂಚಾಲಾಕ್ಷಿ ದ್ವಿತೀಯ ಸ್ಥಾನ, ತೃತೀಯ ರೇಖಾ(ಡಿಸ್ಕಸ್),ಕಾವ್ಯ(ಶಾಟಪಟ್) ತೃತೀಯ ಸ್ಥಾನ ಪಡೆದರು.
ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ಸಂಧ್ಯಾ ಎಂ. ಆಚಾರ್, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯೆ ಸಂಧ್ಯಾ ವೆಂಕಟೇಶ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post