ಉಳ್ಳಾಲ: ವಾದ-ವಿವಾದ, ಆರೋಪ-ಪ್ರತ್ಯಾರೋಪ, ಅಗತ್ಯ ವಿಚಾರಕ್ಕಿಂತ ಅನಗತ್ಯ ವಿಚಾರಗಳ ಚರ್ಚೆಯ ಮಧ್ಯೆ ಏರು ಧ್ವನಿಯ ಮಾತುಗಳ ಮಧ್ಯೆ ಗುರುವಾರ ನಡೆದ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆ ನಲುಗಿಹೋಯಿತು.
ನಗರಸಭೆ ಅಧ್ಯಕ್ಷೆ ಚಿತ್ರಕಲಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕಿಂತ ಮೊದಲು ಒಂದೂವರೆ ಗಂಟೆ ಅನಗತ್ಯ ವಿಷಯಗಳಿಗೆ ವಿನಿಯೋಗವಾಯಿತು. ವಾಲಿಬಾಲ್ ಮೈದಾನದಲ್ಲಿ ಟೆಂಟ್ ಹಾಕಿ ವ್ಯಾಕ್ಸಿನ್ ಕೊಡ್ತಾರೆ, ಕೌನ್ಸಿಲರ್‌ಗಳಿಗೆ ಮಾಹಿತಿ ಇಲ್ಲದೆ ಲಸಿಕೆ ಕೊಟ್ಟಿದ್ದಾರೆ, ಡಿಎಚ್‌ಒಗೆ ಪತ್ರ ಬರೆದು ದಿನ ನಿಗದಿಯಾಗಿ ಎರಡು ಗಂಟೆ ಕಾದರೂ ವ್ಯಾಕ್ಸಿನ್ ಬಂದಿಲ್ಲ ಎಂದು ಜೆಡಿಎಸ್‌ನ ಖಲೀಲ್ ಅಸಮಾಧಾನ ವ್ಯಕ್ತಪಡಿಸಿದರು. ಮನೆಯಲ್ಲಿ ನಿಧನ ಹೊಂದಿದರೂ ಮರಣ ಪ್ರಮಾಣಪತ್ರ ಕೊಡುತ್ತಿಲ್ಲ ಎಂದು ಬಾಜಿಲ್ ಡಿಸೋಜ ಹೇಳಿದರೆ, ಉಪಾಧ್ಯಕ್ಷ ಅಯೂಬ್ ಮಂಚಿಲ ಏರು ಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಪೌರಾಯುಕ್ತ ರಾಯಪ್ಪ ಆರೋಗ್ಯಾಧಿಕಾರಿಯನ್ನು ಕರೆದು, ಜನನ -ಮರಣ ಪ್ರಮಾಣ ಪತ್ರದ ದಾಖಲೆ ನೀವೇ ಇತ್ಯರ್ಥಪಡಿಸಲು ಹೋಗಿ ಸಮಸ್ಯೆ ತಂದುಕೊಳ್ಳಬೇಡಿ ಎಂದು ಸೂಚಿಸಿದರು. ಇದರ ಮಧ್ಯೆಯೇ ಕಾಂಗ್ರೆಸ್‌ನ ರವಿಚಂದ್ರ ಏರು ಧ್ವನಿಯಲ್ಲಿ ಮಾತನಾಡಿದ್ದು, ಪೌರಾಯುಕ್ತರ ಅಸಮಾಧಾನಕ್ಕೆ ಕಾರಣವಾಯಿತು. ಒಬ್ಬರು ಮಾತನಾಡುವಾಗ ಇನ್ನೊಬ್ಬರು ಮಾತನಾಡಬೇಡಿ, ಅಧ್ಯಕ್ಷರ ಅನುಮತಿ ಪಡೆದು ಮಾತನಾಡಿ ಸದನಕ್ಕೆ ಗೌರವ ಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಬಗ್ಗೆ ಗಮನಕ್ಕೆ ತರುವುದಿಲ್ಲ ಎಂದು ಜೆಡಿಎಸ್‌ನ ದಿನಕರ್ ಉಳ್ಳಾಲ್ ಹಾಗೂ ಅಸ್ಗರ್ ಆಕ್ಷೇಪಿಸಿದಾಗ ಕಾಂಗ್ರೆಸ್‌ನ ಇಸ್ಮಾಯಿಲ್ ಧ್ವನಿಗೂಡಿಸಿ ಕಾರ್ಯಕ್ರಮ ನಡೆಸುವಾಗ ಎಲ್ಲರ ಗಮನಕ್ಕೆ ತಂದರೆ ಒಳ್ಳೆಯದು ಎಂದಿದ್ದು ಅಧ್ಯಕ್ಷರಿಗೆ ಇರಿಸುಮುರಿಸು ಉಂಟುಮಾಡಿತು. ಈ ಮಧ್ಯೆ ನಗರಸಭೆ ಅಧಿಕಾರಿಗಳು ಸೋಮೇಶ್ವರದಲ್ಲೂ ಕೆಲಸ ಮಾಡಬೇಕಿರುವುದರಿಂದ ತೊಂದರೆ ಆಗಿದೆ. ಇದನ್ನು ತಡೆಯಲು ಅಧ್ಯಕ್ಷರಿಗೆ ಆಗದಿದ್ದರೆ ಜಿಲ್ಲಾಧಿಕಾರಿ ಬಳಿ ನಾವೇ ಹೋಗುತ್ತೇವೆ ಎಂದು ಬಿಜೆಪಿ ಕೌನ್ಸಿಲರ್‌ಗಳು ಸವಾಲು ಹಾಕಿದರು.
ಆಶ್ರಯ ಸಮಿತಿಗೆ 20 ವರ್ಷ, ಒಳಚರಂಡಿಗೆ 12 ವರ್ಷಗಳಾಗಿವೆ. ಕ್ರೀಡಾಂಗಣಕ್ಕೆ ನಿರ್ಣಯ ಮಾಡಿದ ಬಳಿಕ ಖಾಸಗಿ ಜಮೀನು ಎಂದು ಹೇಳುತ್ತೀರಿ. ಪಂಪ್‌ವೆಲ್ ಮೇಲ್ಸೇತುವೆ ವಿರುದ್ಧ ಮೆರವಣಿಗೆ ಮಾಡಿದಂತೆ ನಾವೂ ಮೆರವಣಿಗೆ ಮಾಡಬೇಕಾಗುತ್ತದೆ. ನಿಮ್ಮ ಅವಧಿಯಲ್ಲೇ ಈ ಸಮಸ್ಯೆಗೆ ಮುಕ್ತಿ ನೀಡಿ ಎಂದು ದಿನಕರ್ ಉಳ್ಳಾಲ್ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post