ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ ಬೆಳವಣಿಗೆ ದರ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 9.2ರಷ್ಟು ಆಗಲಿದ್ದು, ಕೋವಿಡ್‌ಗೂ ಮೊದಲಿನ ಮಟ್ಟವನ್ನು ಮೀರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಹೇಳಿದೆ.
ಎನ್‌ಎಸ್‌ಒ ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಸುಧಾರಿತ ಅಂದಾಜಿನ ಪ್ರಕಾರ, ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆ ಆಗಿದೆ.
ಕೃಷಿ, ಗಣಿಗಾರಿಕೆ ಮತ್ತು ತಯಾರಿಕಾ ವಲಯಗಳ ಬೆಳವಣಿಗೆಯಲ್ಲಿ ಸುಧಾರಣೆ ಕಂಡುಬಂದಿದೆ. ಇದರಿಂದಾಗಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅದು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ಮತ್ತು ಅದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ 2020–21ನೇ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ (–)7.3ರಷ್ಟು ಕುಸಿತ ಕಂಡಿತ್ತು.
2021ರ ಮೇ 31ರಂದು ಬಿಡುಗಡೆ ಮಾಡಿದ್ದ ವರದಿಯಲ್ಲಿ ಜಿಡಿಪಿಯ ಗಾತ್ರವು 2020–21ರಲ್ಲಿ ₹ 135.13 ಲಕ್ಷ ಕೋಟಿಗಳಷ್ಟು ಆಗಲಿದೆ ಎಂದು ಎನ್‌ಎಸ್‌ಒ ಹೇಳಿತ್ತು. 2021–22ರಲ್ಲಿ ಜಿಡಿಪಿ ಗಾತ್ರವು ₹ 147.54 ಲಕ್ಷ ಕೋಟಿಗಳಷ್ಟು ಆಗಲಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ಎನ್‌ಎಸ್‌ಒ ಅಂದಾಜಿನ ಪ್ರಕಾರ, 2021–22ರಲ್ಲಿ ಜಿಡಿಪಿ ಗಾತ್ರವು 2019–20ರಲ್ಲಿ ಇದ್ದಂತಹ ₹ 145.69 ಲಕ್ಷ ಕೋಟಿ ಗಾತ್ರವನ್ನು ಮೀರಲಿದೆ. ಜಿಡಿಪಿಯು ಶೇ 9.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಹೇಳಿದೆ. ಎನ್‌ಎಸ್‌ಒ ಅಂದಾಜು ಅದಕ್ಕಿಂತಲೂ ಕಡಿಮೆ ಇದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯವು ಶೇ 12.5ರಷ್ಟು ಬೆಳವಣಿಗೆ ಕಾಣುವ ಅಂದಾಜು ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 7.2ರಷ್ಟು ಇಳಿಕೆ ಕಂಡಿತ್ತು.
ಎನ್‌ಎಸ್‌ಒ ಅಂದಾಜಿನ ಪ್ರಕಾರ, ಗಣಿಗಾರಿಕೆ ಮತ್ತು ಕ್ವಾರಿ ಶೇ 12.5ರಷ್ಟು ಕಾಣಲಿದೆ. ಕೃಷಿ ವಲಯವು ಶೇ 3.9ರಷ್ಟು ಬೆಳವಣಿಗೆ ಕಾಣುವ ಅಂದಾಜು ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 3.6ರಷ್ಟು ಬೆಳವಣಿಗೆ ಕಂಡಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post