ಬೆಳ್ತಂಗಡಿ ಆ.27: 11 ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳ ನಿವಾಸಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಕಾರಣ ಪ್ರಕರಣದಲ್ಲಿ ತಮ್ಮಹೆಸರು ಬರುತ್ತಿರುವ ಹಿನ್ನೆಲೆ ಸೌಜನ್ಯ ಅವರ ತಾಯಿ ಮುಂದೆಯೇ ಇಂದು ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಪಾದದಲ್ಲಿ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ಜೈನ್ ಆಣೆ ಪ್ರಮಾಣ ಮಾಡಿರುವ ಘಟನೆ ನಡೆಯಿತು.
ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ವರೆಗೆ ಪಾದಯಾತ್ರೆ ಆಯೋಜಿಸಲಾಗಿತ್ತು. ವಿಹಿಂಪ ಸಂಘಟನೆಯ 200 ಕ್ಕೂ ಅಧಿಕ ಮಂದಿ ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳ ದ್ವಾರದವರೆಗೆ ಶಿವ ಪಂಚಾಕ್ಷರಿ ಪಠಣದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬಂದರು. ಇತ್ತ ಧರ್ಮಸ್ಥಳದ ದ್ವಾರದ ಬಳಿ ಸಾವಿರಾರು ಮಂದಿ ಜಮಾಯಿಸಿ ವಿರೋಧಿ ಕೂಗು ಎಬ್ಬಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಪೊಲೀಸರು ಕೂಡ ಜಮಾಯಿಸಿದ್ದರು.
ದ.ಕ. ಎಸ್.ಪಿ. ರಿಷ್ವಂತ್ ಅವರು ಪ್ರತಿಭಟನೆಗಾರರನ್ನು ಧರ್ಮಸ್ಥಳ ದ್ವಾರದ ಬಳಿ ತಡೆದು, ಸೌಜನ್ಯ ಕುಟುಂಬಸ್ಥರು ಹಾಗೂ ವಿಹಿಂಪದ ಪ್ರಮುಖರನ್ನಷ್ಟೆ ದ್ವಾರದ ಒಳ ಪ್ರವೇಶಕ್ಕೆ ಅನುಮತಿ ಮಾಡಿಕೊಟ್ಟರು. ಮಲ್ಲಿಕ್ ಜೈನ್, ಧೀರಜ್ ಕೆಲ್ಲ, ಉದಯ್ ಜೈನ್ ಪ್ರಮಾಣ ಮಾಡುತ್ತಲೆ ಸೌಜನ್ಯ ತಾಯಿ ಕಣ್ಣೀರಿಡುತ್ತಾ ಯಾವುದೇ ಪ್ರತಿಕ್ರಿಯೆ ನೀಡದೆ ಹಿಂದಿರುಗಿದರು.
ಪೊಲೀಸರ ಸರ್ಪಗಾವಲಿನ ನಡುವೆ ಬಜರಂಗದಳ ಮುಖಂಡರು, ಕುಸುಮಾವತಿ ಜೊತೆಗೆ ಒಂದಷ್ಟು ಮಹಿಳೆಯರು ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿಗೆ ಬಂದಿದ್ದಾರೆ. ಕುಸುಮಾವತಿ ತಾನೇನು ಪ್ರಮಾಣ ಮಾಡುವುದಕ್ಕೆ ಬಂದಿಲ್ಲ. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದಷ್ಟೇ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿ ನಾಣ್ಯವನ್ನು ತಲೆಗೆ ಸುತ್ತು ಹಾಕಿ ಕಾಣಿಕೆ ಹಾಕಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post