ಮಂಗಳೂರು: ನಗರದ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿಯಿರುವ ಕಿಂಗ್ಸ್ ಕೋರ್ಟ್ ಅಪಾರ್ಟಮೆಂಟ್‌ನಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ತಂದಿರಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ಪಾಂಡೇಶ್ವರ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ದಾಳಿ ನಡೆಸಿ 11 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಕೇರಳದ ವಿದ್ಯಾರ್ಥಿಗಳ ಗುಂಪಾದ ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಪಿನ್, ಮುಹಮ್ಮದ್ ಸ್ಪ್ಯಾನೀದ್, ನಿಬಿನ್ ಟಿ. ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ಥಾಮಸ್, ಮುಹಮ್ಮದ್ ನಿಹಾಲ್ ಸಿ., ಮುಹಮ್ಮದ್ ಜಾಸೀಲ್ ವಿ., ಸಿನಾನ್ ಪಿ. ಬಂಧಿತ ಆರೋಪಿಗಳಾಗಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಮುಖ್ಯ ಪೊಲೀಸ್ ಕಾನ್‌ಸ್ಟೆಬಲ್ ಪುಟ್ಟರಾಮ್ ಸಿಎಚ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ 2367 ಮಲ್ಲಿಕ್ ಜಾನ್ ಅವರು ಸಂಜೆ 7:45 ರ ಸುಮಾರಿಗೆ ಕರ್ತವ್ಯದಲ್ಲಿದ್ದಾಗ, ಕೇರಳದ ವಿದ್ಯಾರ್ಥಿಗಳ ಗುಂಪೊಂದು ನಿಷೇಧಿತ ಮಾದಕ ದ್ರವ್ಯ ಗಾಂಜಾವನ್ನು ವಾಣಿಜ್ಯ ಪ್ರಮಾಣದಲ್ಲಿ ಖರೀದಿಸಿ ಅತ್ತಾವರದ ಕಾಫ್ರಿಗುಡ್ಡೆಯಲ್ಲಿರುವ ಮಸೀದಿ ಬಳಿಯ ಕಿಂಗ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ ಜಿ 1 ರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಮೇಲೆ ದಾಳಿ ನಡೆದಿದೆ.
ಈ ಮಾಹಿತಿಯ ಆಧಾರದ ಮೇಲೆ, NDPS ಕಾಯ್ದೆ (ಅಪರಾಧ ಸಂಖ್ಯೆ 206/2025, ಸೆಕ್ಷನ್ 8(C), 20(b)(ii) C of NDPS ಕಾಯ್ದೆ 1985) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪಿಎಸ್ಐ ಶೀತಲ್ ಅಲಗೂರ್ ಮತ್ತು ತಂಡವು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದೆ. ಆರೋಪಿಗಳೆಲ್ಲರೂ ಮಂಗಳೂರಿನ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳು ಎನ್ನಲಾಗಿದೆ.
ದಾಳಿಯ ಸಮಯದಲ್ಲಿ, ಪೊಲೀಸರು 7 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾದ ಸುಮಾರು 12 ಕೆಜಿ 264 ಗ್ರಾಂ ಗಾಂಜಾ (ಅಂದಾಜು ಮೌಲ್ಯ 2,45,280 ರೂ.), 2,000 ರೂ. ಮೌಲ್ಯದ ಎರಡು ಡಿಜಿಟಲ್ ತೂಕದ ಯಂತ್ರಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು, ಆರೋಪಿಗಳಿಂದ 3,52,280 ರೂ. ಮೌಲ್ಯದ ಸೊತ್ತುಗಳನ್ನು (1,05,000 ರೂ. ನಗದು ಸೇರಿದಂತೆ) ವಶಕ್ಕೆ ಪಡೆದುಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post