ಪುತ್ತೂರು, ಸೆ.27 : ಪುತ್ತೂರಿನಲ್ಲಿ ಸಹಪಾಠಿ ವಿದ್ಯಾರ್ಥಿನಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಕಡೆಗೂ ಡಿಎನ್ಎ ವರದಿ ಬಂದಿದೆ. ಆರೋಪಿಯೆಂದು ಗುರುತಿಸಲ್ಪಟ್ಟ ಶ್ರೀಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದು ಇದನ್ನು ಪುತ್ತೂರು ಠಾಣೆಯ ಪೊಲೀಸರು ಕೂಡ ತಿಳಿಸಿದ್ದಾರೆ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಎಲ್ಲ ಪಕ್ಷಗಳ ನಾಯಕರು, ಆರೆಸ್ಸೆಸ್ ನಾಯಕರನ್ನು ಭೇಟಿಯಾಗಿದ್ದೇನೆ. ನಾನಾ ರೀತಿಯ ಆರೋಪಗಳನ್ನು ಹೊರಿಸಿ ಬಡ ಕುಟುಂಬವನ್ನು ಒಂಟಿಯನ್ನಾಗಿ ಮಾಡಲಾಗಿತ್ತು. ಆದರೆ ಬಡ ಹುಡುಗಿಯ ಜೀವನ, ಮಗುವಿನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಲಿಲ್ಲ. ಅದಕ್ಕಾಗಿ ಆ ಮಗುವಿನ ತಂದೆ ಯಾರೆಂದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಲಾಯಿತು. ಈಗ ಪಾಸಿಟಿವ್ ವರದಿ ಬಂದಿದೆ.
ನಮಗೇನೂ ಆರೋಪಿ ವಿರುದ್ಧ ಕಾನೂನು ಹೋರಾಟ ನಡೆಸಬೇಕೆಂದು ಇಲ್ಲ. ಅವರಿಬ್ಬರು ಸಂತೋಷದಲ್ಲಿ ಜೀವನ ಮಾಡಲಿ ಎನ್ನುವುದಷ್ಟೆ ನಮ್ಮ ಬಯಕೆ. ಕಾನೂನು ಪ್ರಕಾರ ಯಾವುದೇ ಕಾರಣಕ್ಕು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಸದ್ಯ ಪ್ರಕರಣ ಕೋರ್ಟಿನಲ್ಲಿದ್ದು ಒಳ್ಳೆಯ ರೀತಿಯಲ್ಲಿ ಮುಗಿಸಬೇಕಿದೆ. ಶ್ರೀಕೃಷ್ಣನ ತಂದೆ ಜಗನ್ನಿವಾಸ ರಾವ್ ಭೇಟಿಯಾಗಲು ಭಾರೀ ಪ್ರಯತ್ನ ಪಟ್ಟೆ. ಆದರೆ ಅವರು ಭೇಟಿಗೆ ಅವಕಾಶ ಕೊಟ್ಟಿಲ್ಲ.
ಪ್ರಕರಣದಲ್ಲಿ ಆಗಬಾರದ ಘಟನೆಯೇನೂ ಆಗಿದ್ದಲ್ಲ. ಸಹಜವಾಗಿ ಸಹಪಾಠಿಗಳಾಗಿದ್ದವರು ಪ್ರೀತಿಸಿ ಏನೋ ಆಸೆ ಆಕಾಂಕ್ಷೆಯಿಂದ ಮಾಡಿಕೊಂಡಿದ್ದಾರೆ. ಇದನ್ನು ಇಷ್ಟು ದೊಡ್ಡಕ್ಕೆ ಮಾಡುವ ಅಗತ್ಯವೇ ಇರಲಿಲ್ಲ. ಹಿಂದುತ್ವಕ್ಕೆ ಪುತ್ತೂರು ಶಕ್ತಿಕೇಂದ್ರ. ವಿಶ್ವಕರ್ಮ ಸಮಾಜವೂ ಹಿಂದುತ್ವದ ಪ್ರತೀಕ. ವಿಶ್ವಕರ್ಮ ಸಮಾಜವೇ ಹಿಂದುತ್ವದ ಸಾಂಸ್ಕೃತಿಕ ರೂಪ. ಇದಕ್ಕಾಗಿ ಹಿಂದುತ್ವದ ಸಂಘಟನೆಗಳಿಗೆ, ಪುತ್ತೂರಿನ ಶಾಸಕರಿಗೆ, ಎಲ್ಲ ನಾಯಕರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಒಳ್ಳೆಯ ರೀತಿಯಲ್ಲಿ ಮುಕ್ತಾಯ ಮಾಡಲು ಸಹಕರಿಸಬೇಕು. ಈ ಬಗ್ಗೆ ವಿಶ್ವಕರ್ಮ ಸಮಾಜ ಹೋರಾಟ ಮಾಡುವುದು ಹಿಂದುತ್ವಕ್ಕೆ ಅವಮಾನ ಅಂದುಕೊಳ್ಳುತ್ತೇನೆ, ಹಾಗಂತ ನ್ಯಾಯ ದೊರಕದಿದ್ದರೆ ನಮ್ಮ ಸಮಾಜ ವಿರಮಿಸುವುದೂ ಇಲ್ಲ ಎಂದು ಕೆಪಿ ನಂಜುಂಡಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಆಚಾರ್ಯ ಮತ್ತು ಸಂಘದ ಪ್ರಮುಖರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post