ಮಂಗಳೂರು, ನ.26 : ನಗರದ ಖ್ಯಾತ ಸ್ತ್ರೀ ವೈದ್ಯೆ ಡಾ. ಜಮೀಲಾ ವಿರುದ್ಧ ಹಿಂದು ಯುವತಿಯನ್ನು ಮತಾಂತರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಯುವತಿಯೊಬ್ಬಳು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುವತಿ ಶಿವಾನಿ ಅಲಿಯಾಸ್ ಆಯೇಷಾ, ಕೆಲಸದಲ್ಲಿ ಇದ್ದಾಗ ಖಲೀಲ್ ಪರಿಚಯವಾಗಿ ಅವರ ಸಂಬಂಧಿಕರ ಮನೆಗೆ ಹೋದಾಗ, ಅಲ್ಲಿ ನನಗೆ ನಮಾಜ್ ಕಲಿಸಿ ಕುರಾನ್ ಓದಲು ಕಲಿಸಿದ್ದರು. ಖಲೀಲ್ ಕುಟುಂಬದವರು ನನಗೆ ಆಯೇಷಾ ಎಂದು ಹೆಸರಿಟ್ಟು, ಬುರ್ಖಾ ಹಾಕಿಸಿದ್ದರು ಎಂದು ಮತಾಂತರದ ಕುರಿತು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹತ್ತನೇ ಕ್ಲಾಸ್ ಬಿಟ್ಟು ಫ್ಯಾನ್ಸಿ ಅಂಗಡಿ ಸೇರಿದ್ದ ತನ್ನನ್ನು ಖಲೀಲ್ ಎಂಬಾತ ಮನವೊಲಿಸಿ ಕಲ್ಲಾಪಿನ ಆತನ ಮನೆಗೆ ಕರೆದೊಯ್ದಿದ್ದ. ಅಲ್ಲಿದ್ದ ಆತನ ಸಂಬಂಧಿಕ ಮಹಿಳೆಯರು ಕುರಾನ್ ಓದಲು ಮತ್ತು ನಮಾಜ್ ಮಾಡುವಂತೆ ಬಲವಂತ ಮಾಡಿದ್ದಾರೆ. ಹಣ ಕೊಟ್ಟು ಇಸ್ಲಾಂ ಧರ್ಮಕ್ಕೆ ಸೇರುವಂತೆ ಹೇಳಿ ನಮಾಜ್ ಮಾಡಿಸಿದ್ದಾರೆ. ನನ್ನನ್ನು ಖಲೀಲ್ ಆಟೋದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ, ಫ್ಯಾನ್ಸಿ ಅಂಗಡಿ ಬಿಟ್ಟು ಬಲ್ಮಠದ ಯೇನಪೋಯ ಆಸ್ಪತ್ರೆ ಮಾಲಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಎಂಟು ತಿಂಗಳ ಕಾಲ ಕೆಲಸ ಮಾಡಿದ್ದೇನೆ.

ಇಲ್ಲಿಂದ ಕೇರಳದ ಒಂದು ಮನೆಗೆ ಕೆಲಸಕ್ಕೆ ಹೋಗಿದ್ದಾಗ, ಕೊರೊನಾ ಸಮಯದಲ್ಲಿ ಕೆಲಸ ಬಿಟ್ಟು ಮನೆಗೆ ವಾಪಸ್ ಆಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಡಾ.ಜಮೀಲಾ ಎಂಬುವವರ ಮನೆಯಲ್ಲಿ ಮೊದಲು ಕ್ಲೀನಿಂಗ್ ಕೆಲಸ ಎಂದು ಹೇಳಿ ನಂತರ ಅಡುಗೆ ಕೆಲಸ ಕೊಟ್ಟರು. ಆದರೆ, ಡಾ. ಜಮೀಲಾ ನನಗೆ ತೊಂದರೆ ಕೊಟ್ಟ ಕಾರಣಕ್ಕೆ ತಪ್ಪಿಸಿಕೊಂಡು ಹೊರಬಂದೆ. ಆದರೆ, ಇಲ್ಲಿಯೂ ಕೂಡ ಬುರ್ಖಾ ಹಾಕಿಸಿ, ಕುರಾನ್ ಪುಸ್ತಕ ಕೊಟ್ಟು ಓದಲು, ನಮಾಜ್ ಮಾಡಲು ಹೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ : ಇಸ್ಲಾಮ್‌ಗೆ ಮತಾಂತರ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶಿವಾನಿ ದೂರು ದಾಖಲಿಸಿದ್ದಾರೆ. ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ವಿರುದ್ಧವೂ ಆರೋಪಿಸಲಾಗಿದೆ. ಮಂಗಳೂರಿನ ವೈದ್ಯೆ ಡಾ.ಜಮೀಲಾ ವಿರುದ್ಧ ಮತಾಂತರ ಆರೋಪ ಮಾಡಲಾಗಿದೆ. ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಬಲವಂತದ ಮತಾಂತರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ. ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ದ ಪೊಲೀಸರು ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post