ಮಂಗಳೂರು : ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ (Culpable homicide) ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಲುವಾಗಿ ನಗರದ ಪುರಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಮಿಷನರ್ ಸುಧೀರ್ ರೆಡ್ಡಿ ಮಾತನಾಡಿದರು. ಅಪ್ರಾಪ್ತರಿಗೆ ವಾಹನಗಳನ್ನು ಕೊಡಿಸುವುದು, ಕುಡಿದು ವಾಹನ ಚಲಾಯಿಸುವುದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಕಠಿಣ ಕ್ರಮ ಜರುಗಿಸಲಿದ್ದೇವೆ. ಇಷ್ಟೆಲ್ಲ ರಸ್ತೆ ಸುರಕ್ಷೆ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದರೂ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲೇ 2025ರಲ್ಲಿ 171 ರಸ್ತೆ ಅಪಘಾತಗಳಾಗಿದ್ದು, ಇದರಲ್ಲಿ 25 ಕೇಸುಗಳು ಅಪ್ರಾಪ್ತರು ವಾಹನ ಚಲಾಯಿಸಿದ್ದರಿಂದ ಆಗಿವೆ. ಉಳಿದುದರಲ್ಲಿ ಹೆಚ್ಚಿನ ಪ್ರಕರಣಗಳು ಕುಡಿದು ವಾಹನ ಚಲಾಯಿಸಿದ್ದರಿಂದ ಆಗಿರುವಂಥವು. ಈ ರೀತಿಯ ಅಪಘಾತಗಳು ಹೆಚ್ಚುತ್ತಿರುವ ಕಾರಣದಿಂದ ಟ್ರಾಫಿಕ್ ಪೊಲೀಸರಿಗೆ ಕೊಲೆಗೆ ಸಮಾನ ಎನ್ನುವಂತಹ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ ಎಂದರು.

ಮಂಗಳೂರಿನಲ್ಲಿ 169 ಅಪಘಾತ ಪ್ರಕರಣಗಳು ನಿರ್ಲಕ್ಷ್ಯದಿಂದಲೇ ಆಗಿರುವಂಥವು. ಒಂದೆರಡು ಕೇಸುಗಳು ಮಾತ್ರ ರಸ್ತೆ ಗುಂಡಿ ಮತ್ತಿತರ ಕಾರಣಕ್ಕೆ ಆಗಿರಬಹುದು. ಆದರೆ ಅಪಘಾತಗಳಿಗೆ ರಸ್ತೆ ಗುಂಡಿ, ಆಡಳಿತವನ್ನು ಮಾತ್ರ ದೂಷಣೆ ಮಾಡುತ್ತಾರೆ. ಯಾರು ಕೂಡ ವಾಹನ ಚಲಾವಣೆಯ ನಿರ್ಲಕ್ಷ್ಯದಿಂದ ಆಗಿರುವುದೆಂದು ಹೇಳುವುದಿಲ್ಲ. ವಾಹನ ಚಲಾವಣೆ ವೇಳೆ ಗಂಭೀರ ವಹಿಸುವುದಿಲ್ಲ ಎಂದು ಹೇಳಿದರು.
ಇಲ್ಲಿ ಕಮ್ಯುನಲ್ ಅಥವಾ ರಾಜಕೀಯ ಕಾರಣಕ್ಕೆ ಕೊಲೆಗಳಾದರೆ ಮಾತ್ರ ಸೀರಿಯಸ್ ಆಗುತ್ತಾರೆ. ಅಪಘಾತಗಳಿಂದ ಸಾವು ಆದಲ್ಲಿ ಅದನ್ನು ಗಂಭೀರ ವಹಿಸುವುದಿಲ್ಲ. ಕೆಲವೊಮ್ಮೆ ಅದನ್ನು ಕಮ್ಯುನಲ್ ಏಂಗಲ್ ನಲ್ಲಿ ನೋಡಲು ಯತ್ನಿಸುತ್ತಾರೆ. ಇದನ್ನು ಸಹಿಸಲಾಗದು ಎಂದು ಹೇಳಿದ ಕಮಿಷನರ್ ರೆಡ್ಡಿ, ರಸ್ತೆ ಅಪಘಾತವನ್ನು ತಪ್ಪಿಸುವುದು ಕೇವಲ ಪೊಲೀಸರ ಕೆಲಸ ಅಲ್ಲ, ಅದು ಪ್ರತಿ ನಾಗರಿಕನ ಜವಾಬ್ದಾರಿ. ಪ್ರತಿ ವಾಹನದ ಚಾಲಕನೂ ನಾವು ಎಚ್ಚರದಿಂದ ವಾಹನ ಚಲಾಯಿಸಿದಲ್ಲಿ ಬೇರೆಯವರು ತಪ್ಪು ಮಾಡಿದರೂ ನಮಗೇನೂ ಆಗುವುದಿಲ್ಲ ಎಂಬ ಎಚ್ಚರದಲ್ಲಿ ಇರಬೇಕು ಎಂದು ಸಲಹೆ ನೀಡಿದರು. ಎಲ್ಲ ನಾಗರಿಕರು ಕೂಡ ಅವರಾಗಿಯೇ ನಮ್ಮ ಕರ್ತವ್ಯ, ಜವಾಬ್ದಾರಿಗಳೇನು ಅನ್ನುವುದನ್ನು ಅರಿತು ಅಪಘಾತಗಳೂ ಆಗುವುದಿಲ್ಲ, ಕಮ್ಯುನಲ್ ರೀತಿಯ ತೊಂದರೆಗಳೂ ಆಗುವುದಿಲ್ಲ. ನಾವು ಆ ದಿನಕ್ಕಾಗಿ ಕಾಯುತ್ತಿದ್ದೇವೆ ಎಂದು ಸುಧೀರ್ ರೆಡ್ಡಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳು ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ‘ನಾನು ಮನೆಯಿಂದ ಹೊರ ಹೋದಾಗ ಮನೆಯಲ್ಲಿ ನನ್ನ ಕುಟುಂಬ ಕಾಯುತ್ತಿರುತ್ತದೆ’ ಎಂಬ ಜಾಗೃತ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಬಂದಾಗ ನಿರ್ಲಕ್ಷ್ಯದ ಅಪಘಾತಗಳನ್ನು ತಡೆಯಬಹುದು ಎಂದರು.
ಖ್ಯಾತ ನ್ಯೂರೋ ಸರ್ಜನ್ ಡಾ.ಅರ್ಜುನ್ ಶೆಟ್ಟಿ ಮಾತನಾಡಿ, ನಮ್ಮ ವಾಹನದಲ್ಲಿ ಇತರರನ್ನು ಕರೆದುಕೊಂಡು ಹೋಗುವಾಗ, ನಮ್ಮ ವಾಹನವನ್ನು ಬೇರೆಯವರಿಗೆ ನೀಡುವಾಗ ಸಂಚಾರಿ ನಿಯಮಗಳ ಪಾಲನೆಯನ್ನು ಮಾಡಿದರೆ, ಅಪಘಾತಗಳಿಂದಾಗುವ ಸಾವಿನ ಜತೆಗೆ ಅಪಘಾತಕ್ಕೆ ಈಡಾದವರು ಅನುಭವಿಸುವ ನೋವು ಹಾಗೂ ಕುಟುಂಬ ಪಡುವ ವೇದನೆಯನ್ನು ತಪ್ಪಿಸಬಹುದು ಎಂದರು.
ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೈಬುನ್ನಿಸಾ ಮಾತನಾಡಿ, ದೇಶದಲ್ಲಿ 2025ರಲ್ಲಿ ಸಂಭವಿಸಿದ 4.5 ಲಕ್ಷ ಅಪಘಾತಗಳಲ್ಲಿ 1.60 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಶೇ. 55ರಷ್ಟು ಮಂದಿ 18 ವರ್ಷದಿಂದ 35 ವರ್ಷದೊಳಗಿನವರು ಎಂಬುದು ಗಮನಾರ್ಹ . ಮಂಗಳೂರಿನಲ್ಲಿ 600ಕ್ಕೂ ಅಧಿಕ ಪಾನಮತ್ತರಾಗಿ ವಾಹನ ಚಲಾಯಿಸಿರುವುದು ಪತ್ತೆಯಾಗಿದೆ. ಸಂಚಾರಿ ನಿಯಮ ಪಾಲನೆಯೇ ಜೀವನ ರಕ್ಷೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಬಹು ಮುಖ್ಯ ಎಂದರು.
ವೇದಿಕೆಯಲ್ಲಿ ಡಿಸಿಪಿಗಳಾದ ಮಿಥುನ್ ಕುಮಾರ್, ಪಿ ಉಮೇಶ್, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಎಸಿಪಿಗಳಾದ ಗೀತಾ ಕಲುಕರ್ಣಿ, ವಿಜಯ ಕಾಂತಿ, ಇನ್ನಿತರರು ಉಪಸ್ಥಿತರಿದ್ದರು. ಎಸಿಪಿ ನಜ್ಮಾ ಫಾರೂಕಿ ಸ್ವಾಗತಿಸಿದರು. ಆರ್‌ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post