ಬೆಂಗಳೂರು: ‘ಬಂಟ ಸಮುದಾಯದಲ್ಲೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಹೀಗಾಗಿ ಈ ಸಮುದಾಯದವರನ್ನೂ ಕೇಂದ್ರ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಒತ್ತಾಯಿಸಿದರು.
ಬಂಟರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಕ್ರೀಡಾ ಮತ್ತು ಸಾಂಸ್ಕೃತಿಕ’ ದಿನಾಚರಣೆ ಕಾರ್ಯಕ್ರಮದಲ್ಲಿ ‘ಜೀವರಾಜ್ ಆಳ್ವ ಸದ್ಭಾವನಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಬಂಟ ಸಮುದಾಯವು ಎಲ್ಲಾ ಕ್ಷೇತ್ರ ಗಳಲ್ಲೂ ಗುರುತಿಸಿಕೊಂಡಿದೆ. ಎಲ್ಲಾ ಸಮಾಜದ ವಿಶ್ವಾಸವನ್ನೂ ಗಳಿಸಿದೆ. ಕೇಂದ್ರವು ಈ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಸೇರ್ಪಡೆ ಮಾಡಿದೆ. ಇದರಿಂದ ಸಮುದಾಯದವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ರಾಜ್ಯದಲ್ಲಿ ಬಂಟ ಸಮಾಜ 3–ಬಿ ಪ್ರವರ್ಗದಲ್ಲಿದೆ. ಬಂಟ ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸಬೇಕು’ ಎಂದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ, ‘ಬಂಟ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ
ಮಾಡುತ್ತೇನೆ. ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಆಯುಕ್ತರು ಮತ್ತು ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಎ.ನಾರಾಯಣ ಸ್ವಾಮಿ, ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಕೆ.ಸಿ.ಶೆಟ್ಟಿ, ಮುಂಬೈ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಎಂ.ಮಧುಕರ ಶೆಟ್ಟಿ, ಕ್ರೀಡಾ ಸಮಿತಿ ಮುಖ್ಯಸ್ಥ ರಾಧಾಕೃಷ್ಣ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ವಿಜಯ್ ಜೆ.ಶೆಟ್ಟಿ ಹಾಲಾಡಿ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post