ಮಂಗಳೂರು : 12 ವರ್ಷಗಳ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ (ಜೂನ್ 30) ಪ್ರಕಟಿಸುವುದಾಗಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ತಿಳಿಸಿದೆ.
ಲೆನೆಟ್ ವೇಗಸ್, ಜೊಸ್ಸಿ ವೇಗಸ್ ಹಾಗೂ ಲಸ್ಸಿ ವೇಗಸ್ ಶಿಕ್ಷೆಗೊಳಗಾಗಲಿರುವ ಅಪರಾಧಿಗಳು. 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಎಂಬವರು ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲೆನೆಟ್ ವೇಗಸ್ ಎಂಬವರ ಮನೆಯಲ್ಲಿ ಮಗುವೊಂದನ್ನು ಬೇರೆಯವರಿಂದ ಪಡೆದಿರುವ ಮಾಹಿತಿ ತಿಳಿದು ಬಂದಿತ್ತು. ಬಳಿಕ ಚೈಲ್ಡ್‌ಲೈನ್ ಸಂಸ್ಥೆಯವರು ಲೆನೆಟ್ ಮನೆಗೆ ತೆರಳಿ ಮಗುವಿನ ಕುರಿತು ವಿಚಾರಣೆ ಮಾಡಿದ್ದರು. ಈ ವೇಳೆ ಆಕೆ ಮಗು ತನ್ನದೇ ಎಂದು ಪ್ರತಿಪಾದಿಸಿದ್ದ ಲೆನೆಟ್, ತಾನು ಹೆತ್ತಿರುವ ಸಂಬಂಧ ಮಂಗಳೂರಿನ ನರ್ಸಿಂಗ್ ಹೋಂವೊಂದರ ಡಿಸ್ಟಾರ್ಜ್ ದಾಖಲೆಗಳನ್ನೂ ತೋರಿಸಿದ್ದಳು.
ಆದರೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಮಗುವಿನ ನೈಜ ತಾಯಿಯನ್ನು ಪತ್ತೆ ಹಚ್ಚಿದ್ದರು. ಆ ಮಗು ಉತ್ತರ ಕರ್ನಾಟಕದ ಚೆನ್ನವ್ವ ಎಂಬವರದ್ದಾಗಿತ್ತು. ಕಟ್ಟಡದ ಕೆಲಸಕ್ಕೆ ಬಂದಿದ್ದ ಚೆನ್ನವ್ವ ಬಡತನದ ಹಿನ್ನೆಲೆಯಲ್ಲಿ ಮಗುವನ್ನು ಸುಮಾರು 20 ಸಾವಿರ ರೂ.ಗೆ ಲೆನೆಟ್‌ಗೆ ಮಾರಾಟ ಮಾಡಿದ್ದಳು ಎಂಬುದು ಗೊತ್ತಾಗಿತ್ತು.
ಆರೋಪಿಯನ್ನು ಬಲೆಗೆ ಬೀಳಿಸಿದ ಪೊಲೀಸರು: ಬಳಿಕ ಅಧಿಕಾರಿಗಳು ಅಂದಿನ ಪೊಲೀಸ್ ಕಮಿಷನರ್‌ಗೆ ಮಗುವಿನ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು. ಪ್ರಕರಣ ಬಯಲು ಮಾಡಲು ಪೊಲೀಸ್ ಕಮಿಷನರ್ ಸಹಕಾರದೊಂದಿಗೆ ದುಬೈಯಲ್ಲಿರುವ ಮುಸ್ಲಿಂ ದಂಪತಿಗೆ ಮಗು ಬೇಕಾಗಿದೆ ಎಂದು ಲೆನೆಟ್‌ಳನ್ನು ನಂಬಿಸಲಾಗಿತ್ತು. ಅದರಂತೆ, ತೊಕ್ಕೊಟ್ಟಿನ ವೈದ್ಯರೊಬ್ಬರ ಕ್ಲಿನಿಕ್‌ಗೆ ಮಗುವಿನ ಆರೋಗ್ಯ ತಪಾಸಣೆಗೆ ಬರಲಿಕ್ಕಿದೆ. ಹೆಲ್ತ್ ಚೆಕಪ್ ಆದ ಬಳಿಕ ಮಗುವನ್ನು ಮಾರಾಟ ಮಾಡುತ್ತೇನೆ, ಅಲ್ಲೇ ಹಣ ಕೊಟ್ಟು ಮಗುವನ್ನು ಖರೀದಿಸಿ ಎಂದು ಲೆನೆಟ್ ಹೇಳಿದ್ದಳು.
ಆದ್ದರಿಂದ ಕ್ಲಿನಿಕ್‌ನಿಂದಲೇ ಮಗುವನ್ನು ಖರೀದಿಸುವ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಇರ್ಫಾನ್ ಕೂಡ ಕಾರ್ಯಾಚರಣೆಯ ಭಾಗವಾಗಿದ್ದರು. ಕೊನೆಗೆ 90 ಸಾವಿರ ರೂ. ಕೊಟ್ಟು ಮಗುವನ್ನು ಪಡೆದುಕೊಳ್ಳುವಷ್ಟರಲ್ಲಿ ಲೆನೆಟ್‌ಳನ್ನು ಅಲ್ಲೇ ಇದ್ದ ಪೊಲೀಸರು ಬಂಧಿಸಿ, ಆಕೆಯ ಬಳಿ ಇದ್ದ ಎಲ್ಲಾ ನಕಲಿ ಸರ್ಟಿಫಿಕೆಟ್‌ಗಳು, ಎಟಿಎಂ ಕಾರ್ಡ್‌ಗಳು, ದೆಹಲಿ ವಿಳಾಸದ ನಕಲಿ ವಿಸಿಟಿಂಗ್ ಕಾರ್ಡ್‌ಗಳು ಹಾಗೂ ಮಗುವಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು.
ಮಹಿಳೆ ಚೆನ್ನವ್ವಳನ್ನು ಪತ್ತೆ ಹಚ್ಚಿ ಆಕೆಯದ್ದೇ ಮಗುವೆಂದು ದಾಖಲೆಗಳ ಸಹಿತ ನಿರೂಪಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಲೆನೆಟ್‌ಗೆ ಸಹಕರಿಸಿದ ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಮೇಲೂ ಪ್ರಕರಣ ದಾಖಲಾಯಿತು. 2013ರಲ್ಲಿ ನಡೆದ ಈ ಪ್ರಕರಣದ ಶಿಕ್ಷೆಯ ತೀರ್ಪು ಗುರುವಾರ ಹೊರಬಿದ್ದಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post