ಮಂಗಳೂರು, ಸೆ.27: ಖಾಸಗಿ ಬಸ್ಸುಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಅಪಘಾತ, ಪ್ರಯಾಣಿಕರ ಜೊತೆ ಸಿಬಂದಿ ಜಗಳ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಬಸ್ ಮಾಲಕರ ಜೊತೆ ತುರ್ತು ಸಭೆ ನಡೆಸಿದ್ದು, ಅಜಾಗರೂಕ ಚಾಲನೆಯಿಂದಾಗಿ ಅಪಘಾತವುಂಟಾಗಿ ಸಾವು ಸಂಭವಿಸಿದಲ್ಲಿ ಚಾಲಕ ಮತ್ತು ಬಸ್ ಮಾಲಕರಿಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ಬಸ್ಸು ಮಾಲಕರು, ಎನ್‌ಎಚ್‌ಐ, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಈ ಸೂಚನೆ ನೀಡಿರುವ ಅವರು, ಒಂದು ತಿಂಗಳೊಳಗೆ ಮತ್ತೆ ಸಭೆ ನಡೆಸಿ ಯಾವೆಲ್ಲಾ ಸುಧಾರಣೆ ಆಗಿದೆ ಹಾಗೂ ಆಗಿಲ್ಲ ಎಂಬ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ನಗರದ ಅಂಬೇಡ್ಕರ್ ವೃತ್ತ (ಜ್ಯೋತಿ ಸರ್ಕಲ್), ಹಂಪನಕಟ್ಟೆ ಸೇರಿದಂತೆ ಪ್ರಮುಖ ಬಸ್ಸು ನಿಲ್ದಾಣಗಳಲ್ಲಿ ಬಸ್ಸುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದನ್ನು ತಪ್ಪಿಸಲು ಹೋಂಗಾರ್ಡ್‌ಗಳ ನಿಯೋಜನೆಯನ್ನು ತಮ್ಮ ಖರ್ಚಿನಲ್ಲಿ ಭರಿಸಲು ಬಸ್ಸು ಮಾಲಕರು ಒಪ್ಪಿಕೊಂಡಿದ್ದು, ಅದರಂತೆ ಕ್ರಮ ವಹಿಸಲಾಗುವುದು. ಬಸ್ಸು ನಿಲ್ದಾಣಗಳ ಸಮಸ್ಯೆಯನ್ನು ಪಾಲಿಕೆ ಅಧಿಕಾರಿ ಗಳ ಗಮನಕ್ಕೆ ತರಲಾಗಿದೆ. ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಕರು ಇಲ್ಲದಿರುವುದನ್ನು ನಿರ್ವಾಹಕರು ಖಾತರಿಪಡಿಸಬೇಕು. ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಪೊಲೀಸ್ ಇಲಾಖೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜತೆ ಜಂಟಿ ದಾಳಿಗಳನ್ನು ಕೂಡಾ ನಡೆಸಲಿದೆ ಎಂದು ಪೊಲೀಸ್ ಆಯುಕ್ತರು ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಏಕಕಾಲದಲ್ಲಿ ಮೂರು– ನಾಲ್ಕು ಬಸ್‌ಗಳು ಒಂದೇ ನಿಲ್ದಾಣದ ಮೂಲಕ ಹಾದು ಹೋಗುತ್ತಿವೆ. ಇದರಿಂದ ಪ್ರಯಾಣಿಕರನ್ನು ಸೆಳೆಯಲು ಪೈಪೋಟಿ ಏರ್ಪಡುತ್ತಿದೆ ಎಂದು ಸಂಚಾರ ಪೊಲೀಸರು ವಿವರಿಸಿದರು. ಕದ್ರಿ ಸಂಚಾರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ, ‘ಹೆಚ್ಚಿನ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರು ಯಾರೆಂಬುದೇ ಮಾಲೀಕರಿಗೆ ತಿಳಿದಿರುವುದಿಲ್ಲ. ಕೆಲವು ಮಾಲೀಕರು ಬಸ್‌ಗಳನ್ನು ಚಾಲಕ– ನಿರ್ವಾಹಕರಿಗೆ ಲೀಸ್‌ಗೆ ನೀಡುತ್ತಿದ್ದಾರೆ. ಟಿಕೆಟ್ ಮಾರಾಟದಿಂದ ಬರುವ ಮೊತ್ತದಲ್ಲಿ ನಿರ್ದಿಷ್ಟ ಪಾಲನ್ನು ಪಡೆಯುತ್ತಿದ್ದಾರೆ. ಇದು ಬಸ್ ಸಿಬ್ಬಂದಿಯಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದೆ. ಈ ಒತ್ತಡವೇ ಅಪಘಾತಗಳಿಗೂ ಕಾರಣವಾಗುತ್ತಿದೆ’ ಎಂದು ವಿವರಿಸಿದರು.
ನಗರದಲ್ಲಿ ರಸ್ತೆ ಹೊಂಡ ಗುಂಡಿ ಮುಚ್ಚುವಲ್ಲಿ ಕ್ರಮವಾಗಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅವರು ಪಾಲಿಕೆ ಇಂಜಿನಿಯರ್‌ಗೆ ಸೂಚಿಸಿದಾಗ, ಆ ಕಾರ್ಯ ನಾವು ಮಾಡುತ್ತಿದ್ದೇವೆ ಎಂದರು. ನೀವು ಸರಿಯಾಗಿ ಮಾಡದ ಕಾರಣ ನಮ್ಮವರೂ ಆ ಕಾರ್ಯವನ್ನು ನಗರದಲ್ಲಿ ಮಾಡಬೇಕಾಗಿದೆ ಎಂದು ಹೇಳಿದ ಕಮಿಷನರ್, ಅಸಮರ್ಪಕ ರಸ್ತೆಗಳಿಂದಾಗುವ ಅಪಘಾತಗಳಿಗೆ ಸ್ಥಳೀಯಾಡಳಿತದ ಇಂಜಿನಿಯರ್‌ಗಳನ್ನೇ ಹೊಣೆಯಾಗಿಸುವ ಬೆಂಗಳೂರಿನ ಕ್ರಮವನ್ನು ಇಲ್ಲಿಯೂ ಅನುಸರಿಸಬೇಕಾಗುತ್ತದೆ ಎಂದು ಹೇಳಿದರು.
“ನಿರ್ಲಕ್ಷ್ಯದ ಚಾಲನೆ ವಿರುದ್ಧ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗುತ್ತಿದೆ. ಚಾಲನಾ ಪರವಾನಿಗೆ ರದ್ಧತಿಗೆ ಸಂಬಂಧಿಸಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಲ್ಲಿಸಲಾದ 937 ಅರ್ಜಿಗಳಲ್ಲಿ ಈ ವರ್ಷ 90 ಮಂದಿಯ ಪರವಾನಿಗೆ ಅಮಾನತುಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 771 ಪರವಾನಿಗೆಗಳು ಅಮಾನುತುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ತಿಳಿಸಿದರು.
ಡಿಸಿಪಿ ದಿನೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿಗಳಾದ ಮಹೇಶ್ ಕುಮಾರ್, ಗೀತಾ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post