ಬೆಂಗಳೂರು: 20 ದಿನಗಳ ಹಿಂದಷ್ಟೇ ಉದ್ಯಮಿ ಮನೆಗೆ ಕೆಲಸಕ್ಕೆ ಬಂದ ನೇಪಾಳ ಮೂಲದ ದಂಪತಿಗಳು ಮಾಲೀಕರು ಹೊರಗೆ ಹೋಗಿದ್ದಾಗ ಬರೋಬ್ಬರಿ 18 ಕೋಟಿ ಮೌಲ್ಯದ 11.5 ಕೆಜಿ ಚಿನ್ನಾಭರಣ ಕದ್ದೊಯ್ದಿದ್ದಾರೆ.
ಶಿವಕುಮಾರ್ ಮನೆಯಲ್ಲಿ ಆರು ತಿಂಗಳಿನಿಂದ ನವೀಕರಣ ಕಾಮಗಾರಿ ನಡೀತಿತ್ತು. ಇದಕ್ಕಾಗಿ 60 ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನೇಶ್ ಮತ್ತು ಕಮಲಾ ದಂಪತಿ ಜೊತೆಗಿದ್ದು ಎಲ್ಲ ಕೆಲಸವನ್ನು ನೋಡಿಕೊಂಡಿದ್ದರು. ಮನೆಯ ಕೆಲಸ ಮುಗಿದ ಬಳಿಕ ಕಮಲಾ ಇತ್ತೀಚೆಗೆ ಅಡುಗೆ ಕೆಲಸಕ್ಕಾಗಿ ಸೇರಿಕೊಂಡಿದ್ದಳು. ದಿನೇಶ್ ಕೂಡ ಆಕೆಗೆ ಸಹಾಯಕನಾಗಿ ತರಕಾರಿ ತರುವ ಕೆಲಸಗಳನ್ನು ಮಾಡುತ್ತಿದ್ದ. ಈ ನಡುವೆ, ಮಗನಿಗೆ ಮದುವೆಯಾಗಿದ್ದರಿಂದ ಇವರ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಮೊನ್ನೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದಾರೆ ಎಂದು ಬಿಲ್ಡರ್ ಶಿವಕುಮಾರ್ ತಿಳಿಸಿದ್ದಾರೆ.
ಕಳವಾದ ದಿವಸ ಶಿವಕುಮಾರ್ ಬಾಲಿಗೆ ಪ್ರವಾಸ ಹೋಗಿದ್ದರು. ಮನೆಯವರು ಹತ್ತಿರದಲ್ಲಿ ಭೂಮಿ ಪೂಜೆ ಇದೆಯೆಂದು ಅಲ್ಲಿಗೆ ತೆರಳಿದ್ದರು. ಮನೆಯಲ್ಲಿ ಅಡುಗೆ ಕೆಲಸದಾಳು ಕಮಲಾ ಇದ್ದಾಳೆಂದು ಆಕೆಯನ್ನು ಬಿಟ್ಟು ಹೋಗಿದ್ದರು. ಆದರೆ 40 ನಿಮಿಷ ಬಿಟ್ಟು ಬರುವಷ್ಟರಲ್ಲಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಸುಮಾರು 17.73 ಕೋಟಿ ರೂಪಾಯಿ ಮೌಲ್ಯದ 11.5 ಕೆಜಿ ಚಿನ್ನ ವಜ್ರದ ಆಭರಣ, 14.60 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ ಬೆಳ್ಳಿ, 11.50 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 19 ವರ್ಷಗಳಿಂದ ಎಂ.ಆರ್ ಶಿವಕುಮಾರ್ ಮಾರತಹಳ್ಳಿಯಲ್ಲಿ ಬಿಲ್ದರ್ ಆಗಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ವಿಕಾಸ್ ಮತ್ತು ವಿಷ್ಣು ಎಂಬವರ ಸಹಾಯದಿಂದ ದಿನೇಶ್ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಲು ವಿದ್ಯುತ್ ಸಂಪರ್ಕ, ಯುಪಿಎಸ್ ಆಫ್ ಮಾಡಿ ವೈ ಫೈ ಸಂಪರ್ಕ ಕಡಿತಗೊಳಿಸಿದ್ದಾರೆ. ಕೃತ್ಯದಲ್ಲಿ ಸುಮಾರು ಐವರು ಪಾಲ್ಗೊಂಡಿದ್ದಾರೆ ಎಂದು ಶಂಕಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಪ್ರಾರಂಭಿಸಿದ್ದಾರೆ. ಕಳೆದ 32 ವರ್ಷಗಳಿಂದ ಸಂಪಾದಿಸಿದ ಆಸ್ತಿಯೆನ್ನೆಲ್ಲಾ ಕಳ್ಳರು ದೋಚಿದ್ದಾರೆ ಎಂದು ಶಿವಕುಮಾರ್ ಹೇಳಿದ್ದು, ಇದನ್ನು ಕುಟುಂಬಕ್ಕೆ ಹಂಚಿಕೆ ಮಾಡಲು ಬ್ಯಾಂಕಿನಿಂದ ತಂದಿದ್ದೆ, ಅದೇ ದಿನವೇ ಕಳ್ಳತನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆ ಮಾಲೀಕರು ಎಲ್ಲಾ ಅನುಮಾನಿತರ ವಿರುದ್ಧ ದೂರು ನೀಡಿದ್ದು, ಮಾರತ್ತಹಳ್ಳಿ ಪೊಲೀಸರು ಈಗಾಗಲೇ ಓರ್ವ ಶಂಕಿತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳನ್ನ ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು, ಅವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.
Discover more from Coastal Times Kannada
Subscribe to get the latest posts sent to your email.








Discussion about this post