ಉಡುಪಿ, ಮೇ 28: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಉಡುಪಿಯ ಹಿಜಾಬ್ ವಿವಾದದ ಸಂದರ್ಭದಲ್ಲಿ ಉಚ್ಚಾಟನೆಗೊಳಗಾಗಿದ್ದ ಎಂಟು ವಿದ್ಯಾರ್ಥಿಗಳಲ್ಲಿ ಓರ್ವಳಾದ ಆಲಿಯಾ ಅಸ್ಸಾದಿ, “ಹಿಜಾಬ್‌ಗಾಗಿ ಅಂದು ನಮ್ಮನ್ನು ಹೊರದಬ್ಬಿದ್ರಿ: ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ” ಎಂದು ಟಾಂಗ್ ನೀಡಿದ್ದಾರೆ.
ತನ್ನ ‘ಎಕ್ಸ್’ ಪೋಸ್ಟ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯು, “ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನ ಇತ್ತು. ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿದಿರಿ. ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ. ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ” ಎಂದು ಹೇಳಿದ್ದಾರೆ. “ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿನಿ. ನೀವು ಉಚ್ಚಾಟಿತ ವ್ಯಕ್ತಿ, ಅಭ್ಯರ್ಥಿ” ಎಂದು ಆಲಿಯಾ ಅಸ್ಸಾದಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿನಿಗೆ ಅಂದಿನ ಸ್ಥಳೀಯ ಶಾಸಕ ರಘುಪತಿ ಭಟ್ ಅವರು ವಿರೋಧಿಸಿ ಅವಕಾಶ ಕೊಡದೇ ಪರೀಕ್ಷೆ ಬರೆಯುವುದರಿಂದ ಉಚ್ಛಾಟನೆ ಮಾಡಿದ್ದರು. ಇದಕ್ಕೆ ಎರಡು ವರ್ಷಗಳ ಬಳಿಕ ವಿದ್ಯಾರ್ಥಿನಿ ಅಲಿಯಾ ಅಸಾದಿ ‘ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ ಇತ್ತು. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರಿಗೆ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ, ಯಶಪಾಲ್ ಸುವರ್ಣ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಆನಂತರ, ವಿಧಾನ ಷರಿಷತ್ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬೇರೆಯವರ ಪಾಲಾಗಿದೆ. ಇದರಿಂದ ಸಿಟ್ಟಿಗೆದ್ದ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post