ಮಂಗಳೂರು, ಜೂ.28: ಮನೆಯಲ್ಲಿ ಒಂಟಿಯಾಗಿದ್ದ ಅವಿವಾಹಿತ 53 ವರ್ಷ ಪ್ರಾಯದ ಮಹಿಳೆಯ ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ. 2020ನೇ ಇಸವಿ ಸೆಪ್ಟೆಂಬರ್ 24 ರಂದು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕಣಂತೂರು, ಬೆಳ್ಳೇರಿ ಎಂಬಲ್ಲಿ ಒಂಟಿಯಾಗಿ ವಾಸವಿದ್ದ 53 ವರ್ಷದ ಅವಿವಾಹಿತ ಮಹಿಳೆ ಕುಸುಮಾ ತನ್ನದೇ ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಕೊಲೆಯಾದ ರೀತಿ ಕಂಡುಬಂದಿದ್ದರು. ನೆರೆ ಮನೆಯವರಿಂದ ಕುಸುಮಾ ಸಾವಿನ ವಿಚಾರ ಬೆಳಕಿಗೆ ಬಂದಿತ್ತು. ಕೊಣಾಜೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಕೆಲವೇ ದಿನಗಳಲ್ಲಿ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿ, ಕಾಸರಗೋಡು ಜಿಲ್ಲೆಯ ಗಡಿಭಾಗದ ಪಾತೂರು ನಿವಾಸಿ ಕೂಲಿ ಕಾರ್ಮಿಕನಾಗಿದ್ದ ಅಶ್ರಫ್ ನನ್ನು ಬಂಧಿಸಿದ್ದರು.
ಆರೋಪಿ ಅಶ್ರಫ್ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಗೈದು, ಆಕೆಯ ಕಿವಿ ಓಲೆ ಮತ್ತು ಮನೆಯಲ್ಲಿದ್ದ 15 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದ. ಪೊಲೀಸರು ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಗಿ ವರದಿ ಬಂದಿತ್ತು. ಅಂದಿನ ಎಸಿಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ತನಿಖೆಯ ಜಾಡು ಹಿಡಿದ ಪೊಲೀಸರು ಪಾತೂರು ನಿವಾಸಿ ಅಶ್ರಫ್ ನನ್ನ ಬಂಧಿಸಿದ್ದರು.
ಕೊಲೆ ನಡೆದ ಕೆಲವೇ ದಿನಗಳ ಹಿಂದೆ ಅಶ್ರಫ್, ಕುಸುಮಾ ಅವರ ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದ. ಬಾವಿಗೆ ಬಿದ್ದಿದ್ದ ಹೆಬ್ಬಾವು ತೆಗೆಯುವುದಕ್ಕೂ ಸಹಕರಿಸಿದ್ದ. ಮಹಿಳೆ ಒಂಟಿಯಾಗಿರುವುದು, ಮನೆ ತುಂಬಾ ಅಡಿಕೆ ಬೆಳೆ ಇರುವುದನ್ನು ಗಮನಿಸಿ ಲಕ್ಷಾಂತರ ರೂಪಾಯಿ ಹಣ ಮನೆಯಲ್ಲಿ ಇರಬಹುದು ಎಂದು ಕಳ್ಳತನಕ್ಕೆ ಯೋಜನೆ ಹಾಕಿದ್ದ. ಅದರಂತೆ, ಮನೆಗೆ ನುಗ್ಗಿದ್ದ ಅಶ್ರಫ್ ಗೆ 15,000 ರೂ. ನಗದು ಸಿಕ್ಕಿತ್ತು. ಇಷ್ಟಕ್ಕೆ ಸುಮ್ಮನಾಗದ ಕಿರಾತಕ 53 ವರುಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದು ಆಕೆಯ ಬಳಿಯಿದ್ದ ಚಿನ್ನದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಸಜೆ, ಕಲಂ 448ರಡಿ 1 ವರ್ಷ ಶಿಕ್ಷೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಜೆ, ಕಲಂ 376ರಡಿ 10 ವರ್ಷ ಶಿಕ್ಷೆ, 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಶಿಕ್ಷೆ, ಕಲಂ 392ರಡಿ 10 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ, ಕಲಂ 201ರಡಿ 7 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಶಿಕ್ಷೆ ವಿಧಿಸಿದ್ದಾರೆ.
ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿದ್ದ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post