ಅದು ಗಿಳಿ ಹಸಿರು ಬಣ್ಣದ, ಕಡುಗೆಂಪು ಅಂಚಿನ ಜರಿ ಸೀರೆ. ಒಡಲ ತುಂಬ ಜರಿಯ ಬುಟ್ಟಾ; ಸೆರಗು ಮತ್ತು ಅಂಗೈ ಅಗಲದ ಅಂಚಿನಲ್ಲಿ ಜರಿಯಿಂದ ಹೆಣೆದ ಮೀನಾಕರಿ ವಿನ್ಯಾಸ. ನ್ಯಾಫ್ತಾ ಗುಳಿಗೆಗಳ ಪರಿಮಳ ಸೂಸುವ ಮಡಿಚಿಟ್ಟ ಸೀರೆ ಎತ್ತಿ ನೋಡಿದರೆ ಕೊಂಚ ಭಾರವೇ. ಎಂಥವರಿಗಾದರೂ ಒಮ್ಮೆ ಉಟ್ಟುಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುವಾಸೆ ಸಹಜ ಕೂಡ.
‘ಕೈಮಗ್ಗ ಸೀರೆಗಳ ರಾಣಿ’ ಎಂದೇ ಕರೆಯಲಾಗುವ ಬನಾರಸಿ ಸೀರೆ ಎಂದಿನಿಂದಲೂ ಮದುವೆ ಹೆಣ್ಣಿನ ನೆಚ್ಚಿನ ಸೀರೆ. ಹಿಂದೆಲ್ಲ ಮಲೆನಾಡಿನ ಕೆಲವು ಭಾಗದಲ್ಲಿ ತಮಿಳುನಾಡಿನ ಕಾಂಚೀಪುರಂ ಊರಿಗೆ ಹೋದರೆ ಮಾತ್ರ ಕಾಂಜೀವರಂ ಸೀರೆ ತಂದುಕೊಳ್ಳುವ ರೂಢಿಯಿತ್ತು. ಅದು ಬಿಟ್ಟರೆ ಬಹಳ ವರ್ಷಗಳ ಕಾಲ ಬಾಳಿಕೆ ಬರುತ್ತದೆಂದು ಮದುವೆಯಲ್ಲಿ ವಧುವಿಗೆ ಕೊಡುವುದು ಬನಾರಸಿ ಸೀರೆಯೇ ಆಗಿತ್ತು.
ಗುಣಮಟ್ಟದ ರೇಷ್ಮೆ, ಮನಮೋಹಕ ವಿನ್ಯಾಸ, ಅಪ್ಪಟ ಚಿನ್ನ, ಬೆಳ್ಳಿ ಅಂಶವಿರುವ ಜರಿಯಿಂದ ಮಾಡಿದ ಮೀನಾಕರಿ ಕುಸುರಿ ಕೆಲಸದಿಂದ ಮಿಂಚುವ ಈ ಸೀರೆ ರಾಯಲ್ ಲುಕ್ ನೀಡುತ್ತದೆ. ಬಹಳ ಹಿಂದಿನಿಂದಲೂ ಅಂದರೆ ಮೊಗಲರ ಕಾಲದಿಂದಲೂ ಉತ್ತರ ಪ್ರದೇಶದ ವಾರಾಣಸಿ (ಬನಾರಸ್) ಯಲ್ಲಿ ಕೈಮಗ್ಗದಲ್ಲಿ ತಯಾರಾಗುತ್ತಿದ್ದ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದ್ದರೂ ಅದೇ ಹೊಳಪು, ವಿನ್ಯಾಸ, ಮೃದುತ್ವ ಉಳಿಸಿಕೊಳ್ಳಲಾಗಿದೆ. ಅಪ್ಪಟ ರೇಷ್ಮೆ (ಕತಾನ್), ಆರ್ಗಂಜಾ (ಕೋರಾ), ಜಾರ್ಜೆಟ್, ಶತ್ತಿರ್ ಮೊದಲಾದ ನೂಲಿನಲ್ಲಿ ಹೆಣೆದು ವೈವಿಧ್ಯತೆ ಮೆರೆಯಲಾಗುತ್ತಿದೆ. ಹಾಗೆಯೇ ನೇಯ್ಗೆ ಮತ್ತು ವಿನ್ಯಾಸದ ಮೇಲೆ ಜಾಂಗ್ಲಾ, ತಾಂಚೋಯ್, ಕಟ್‌ವರ್ಕ್, ಬುಟ್ಟಾ ಎಂದು ವಿಂಗಡಿಸಲಾಗಿದೆ.
ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬನಾರಸಿ ಸೀರೆಗಳ ಸಂಗ್ರಹವೇ ಲಭ್ಯ. ಆದರೆ ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಶುದ್ಧ ಬನಾರಸಿ ಸೀರೆ 5600 ನೂಲುಗಳನ್ನು ಹೊಂದಿದ್ದು, ಒಂದೊಂದು ನೂಲೂ ಅಗಲವಾಗಿರುತ್ತದೆ. ಒತ್ತೊತ್ತಾಗಿ ಜರಿಯ ನೇಯ್ಗೆ ಇದ್ದಷ್ಟೂ ಅದರ ಬೆಲೆಯೂ ಹೆಚ್ಚು. ಬನಾರಸಿ ಸೀರೆಯ ಜರಿ ಕೆಲವೊಮ್ಮೆ ಕಪ್ಪಾದರೂ ಪಾಲಿಶ್ ಮಾಡಿಸಿದರೆ ಹೊಳಪನ್ನು ಉಳಿಸಿಕೊಳ್ಳಬಹುದು.
ಎಲ್ಲಾ ರೀತಿಯ ದೇಹ ಹೊಂದಿದ ಹೆಣ್ಣುಮಕ್ಕಳಿಗೂ ಬನಾರಸಿ ಸೀರೆ ಚೆನ್ನಾಗಿಯೇ ಕಾಣುತ್ತದೆ. ಆದರೂ ಫ್ಯಾಷನ್ ಬಗ್ಗೆ ಜಾಸ್ತಿ ಒಲವು ಇರುವವರು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸಪೂರ ಹಾಗೂ ಎತ್ತರವಿರುವವರು ಗಾಢ ರಂಗಿನ, ಅಗಲವಾದ ವಿನ್ಯಾಸವಿರುವ, ಅಗಲ ಅಂಚಿನ ಸೀರೆ ಉಡಬಹುದು. ದಪ್ಪ ಹಾಗೂ ಎತ್ತರ ಕಮ್ಮಿ ಇರುವವರು ತಿಳಿ ವರ್ಣದ, ಸಣ್ಣ ಅಂಚಿನ, ಸಣ್ಣ ವಿನ್ಯಾಸದ ಸೀರೆ ಉಟ್ಟರೆ ಲಾವಣ್ಯಮಯವಾಗಿ ಕಾಣುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post