ಮಳೆಗಾಳದಲ್ಲಿ ತಂಪಾದ ವಾತಾವರಣವನ್ನೇನೋ ಕಾಣಬಹುದು. ಆದರೆ ಜೊತೆ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತವೆ. ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮಿನಿಂದ ವೈರಲ್ ಜ್ವರದವರೆಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಇವು ಎಲ್ಲರ ಮೇಲೆ ಪರಿಣಾಮ ಬೀರಬಹುದು, ವಿಶೇಷವಾಗಿ ಮಧುಮೇಹ ರೋಗಿಗಳು ಈ ಋತುವಿನಲ್ಲಿ ಹೆಚ್ಚಿನ ಕಾಳಜಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಅಧಿಕ ಸಕ್ಕರೆ ಪ್ರಮಾಣದಿಂದಾಗಿ ಇತರರಿಗೆ ಹೋಲಿಸಿದರೆ ಮಧುಮೇಹ ಇರುವವರಲ್ಲಿ ರೋಗನಿರೋಧಕ ಶಕ್ತಿಯು ದುರ್ಬಲಗೊಳ್ಳುವುದರಿಂದಾಗಿ ಅವರು ಹೆಚ್ಚಿನ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.
1. ಹೈಡ್ರೇಟ್ ಆಗಿರಿ;
ಯಾವುದೇ ಕಠಿಣ ದೈಹಿಕ ಚಟುವಟಿಕೆಯನ್ನು ಮಾಡದಿದ್ದರೂ ಕೂಡ ಸಾಕಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಕ್ಕರೆಯನ್ನು ಸೇರಿಸಿದ ಯಾವುದೇ ಕಾರ್ಬೊನೇಟೆಡ್ ಪಾನೀಯಗಳು ಅಥವಾ ಪ್ಯಾಕ್ ಮಾಡಿದ ಜ್ಯೂಸ್ ಕುಡಿಯಬಾರದು. ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿದ ಜ್ಯೂಸ್‌ಗಳನ್ನು ಆಯ್ಕೆಮಾಡಿಕೊಳ್ಳಬೇಕು. ಎಳನೀರು ಕೂಡ ತುಂಬಾ ಒಳ್ಳೆಯದು.
2. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ;
ಮಾನ್ಸೂನ್ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಹಲವಾರು ಸೂಕ್ಷ್ಮಜೀವಿಗಳನ್ನು ಹೊತ್ತು ತರುತ್ತದೆ. ಹೀಗಾಗಿ ನಿಯಮಿತವಾಗಿ ಸ್ವಚ್ಚಗೊಳಿಸಿಕೊಳ್ಳಬೇಕು. ಸೋಂಕನ್ನು ತಡೆಗಟ್ಟಲು ಕೈಗಳನ್ನು ಆಗಾಗ ತೊಳೆದುಕೊಳ್ಳುತ್ತಿರಬೇಕು. ಅಲ್ಲದೆ, ಉಗುರುಗಳು ಸೂಕ್ಷ್ಮಜೀವಿಗಳಿಗೆ ಹಾಟ್‌ಸ್ಪಾಟ್ ಆಗಿರುವುದರಿಂದ ಅವುಗಳನ್ನು ಕತ್ತರಿಸಿಕೊಳ್ಳಬೇಕು. ಬೆಚ್ಚಗಿನ ನೀರಿನಿಂದ ಮಾತ್ರ ಸ್ನಾನ ಮಾಡಬೇಕು.
3. ತೇವಾಂಶದಿಂದ ಮುಕ್ತರಾಗಿ;
ಒಂದು ವೇಳೆ ಮಳೆಯಲ್ಲಿ ನೆನೆದರೆ ಕೂಡಲೇ ಬಟ್ಟೆ ಮತ್ತು ಪಾದರಕ್ಷೆಗಳನ್ನು ಬದಲಾಯಿಸಬೇಕು. ಮಧುಮೇಹದಿಂದಾಗಿ ಪಾದಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಪ್ಪಿಸಲು ಪಾದಗಳನ್ನು ಯಾವಾಗಲೂ ಸ್ವಚ್ಟವಾಗಿ ಮತ್ತು ಒಣಗಿಸಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇದು ಮಧುಮೇಹಿಗಳಿಗೆ ಉಂಟಾಗುವ ಯಾವುದೇ ಆಂತರಿಕ ನರ ಹಾನಿಯನ್ನು ತಡೆಯುತ್ತದೆ.
4. ಕಚ್ಚಾ ಆಹಾರವನ್ನು ಸೇವಿಸಬೇಡಿ;
ಸೂಕ್ಷ್ಮಜೀವಿಗಳು ಕಚ್ಚಾ ಆಹಾರದ ಮೇಲೆ ಇರುವುದರಿಂದಾಗಿ ಎಲ್ಲ ಹಸಿ ತರಕಾರಿಗಳನ್ನು ತಿನ್ನುವ ಬದಲು ಬೇಯಿಸಿಕೊಂಡು ತಿನ್ನುವುದು ಒಳಿತು.
5. ಹಣ್ಣು ಮತ್ತು ತರಕಾರಿಗಳನ್ನು ತೊಳೆಯಿರಿ;
ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಬೇಕು. ವಿನೆಗರ್ ನೀರಿನಲ್ಲಿ ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸದೊಂದಿಗೆ ನೆನೆಸಿ ತೊಳೆಯುವುದರಿಂದ ಅವುಗಳ ಮೇಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
6. ಹೊರಗಿನ ತಿಂಡಿಯನ್ನು ನಿಲ್ಲಿಸಿ;
ಹೊರಗಿನ ಆಹಾರ ಸೇವನೆ ನಿಲ್ಲಿಸುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುವ ಜೊತೆಗೆ ಅರ್ಧ ಬೇಯಿಸಿದ ಆಹಾರ ಸೇವನೆಯ ತೊಂದರೆ ತಪ್ಪುತ್ತದೆ. ಅದರ ಬದಲು, ಮನೆಯಲ್ಲಿ ಬೇಯಿಸಿದ ಆಹಾರ ಸೇವನೆ ಉತ್ತಮ
7. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ;
ವಿಟಮಿನ್ಸ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post