ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಏಷ್ಯಾಕಪ್ನಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ. ಇದರ ಜತೆಗೆ ಐಸಿಸಿ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಬಳಗ 5 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ತಂಡದ ಪರ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ ಪ್ರದರ್ಶಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ 19.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147ರನ್ಗಳಿಸಿತು. ಇದರ ಬೆನ್ನತ್ತಿದ ಟೀಂ ಇಂಡಿಯಾ 19.4 ಓವರ್ಗಳಲ್ಲಿ 148ರನ್ಗಳಿಸಿ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ ಕೊಹ್ಲಿ, ಜಡೇಜಾ, ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ 4ವಿಕೆಟ್, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ಅರ್ಷದೀಪ್ 2 ಹಾಗೂ ಆವೇಶ್ ಖಾನ್ 1ವಿಕೆಟ್ ಕಿತ್ತರು. ಪಾಕಿಸ್ತಾನದ ಪರ ರಿಜ್ವಾನ್(42ರನ್) ಬ್ಯಾಟಿಂಗ್ನಲ್ಲಿ ಮಿಂಚಿದರು.
ಪಾಕಿಸ್ತಾನ ಇನ್ನಿಂಗ್ಸ್: ಟಾಸ್ ಸೋತು ಇನಿಂಗ್ಸ್ ಆರಂಭಿಸಿದ್ದ ಪಾಕ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಪಂದ್ಯದ ಮೂರನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಪಾಕ್ ನಾಯಕ ಬಾಬರ್ ಆಜಂ (10) ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ಬಳಿಕ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದರು.ಆದರೆ, ಫಖರ್ ವಿಕೆಟ್ ಪಡೆದುಕೊಳ್ಳುವಲ್ಲಿ ಆವೇಶ್ ಯಶಸ್ವಿಯಾದರು. ಮೊದಲ 10 ಓವರ್ಗಳಲ್ಲಿ ಪಾಕ್ 68 ರನ್ ಕಲೆಹಾಕಿತು. ಉತ್ತಮವಾಗಿ ಆಡ್ತಿದ್ದ ಇಫ್ತಿಕರ್ ಅಹ್ಮದ್ (28) ವಿಕೆಟ್ ಪಾಂಡ್ಯ ಪಡೆದುಕೊಂಡರು. ರಿಜ್ವಾನ್ (42) ಕೂಡ ಪಾಂಡ್ಯಗೆ ಬಲಿಯಾದರು. ಇದರ ಬೆನ್ನಲ್ಲೇ ಖುಷ್ದಿಲ್ ಶಾ (7) ಜಡೇಜಾಗೆ ಕ್ಯಾಚ್ ನೀಡಿ ಹೊರನಡೆದರು.ಪಾಕ್ 15ನೇ ಓವರ್ನಲ್ಲಿ 100 ರನ್ಗಳ ಗಟಿದಾಡುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು.ಕೊನೆಯದಾಗಿ ತಂಡ 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಇನ್ನಿಂಗ್ಸ್: 148 ರನ್ಗಳ ಟಾರ್ಗೆಟ್ ಪಡೆದ ಭಾರತದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಕೆಎಲ್ ರಾಹುಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಕೊಹ್ಲಿ 34 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ಆರಂಭಿಕ ಆಘಾತದಿಂದ ಪಾರು ಮಾಡಿದರು. 12ರನ್ಗಳಿಕೆ ಮಾಡಿದ್ದ ವೇಳೆ ರೋಹಿತ್ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು.ಇದರ ಬೆನ್ನಲ್ಲೇ ವಿರಾಟ್ ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ 36 ರನ್ಗಳ ಉಪಯುಕ್ತ ಜೊತೆಯಾಟವಾಡಿದರು. 18ರನ್ಗಳಿಸಿದ್ದ ಯಾದವ್ ವಿಕೆಟ್ ಒಪ್ಪಿಸಿದರು. ತಂಡ 16ನೇ ಓವರ್ನಲ್ಲಿ 100ರನ್ಗಳಿಕೆ ಮಾಡಿತು. ಜೊತೆಗೆ ಕೊನೆಯ 4 ಓವರ್ಗಳಲ್ಲಿ 48ರನ್ಗಳ ಅವಶ್ಯಕತೆ ಇತ್ತು.ಈ ವೇಳೆ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್ನಲ್ಲಿದ್ದರು. 17ನೇ ಓವರ್ನಲ್ಲಿ 9 ರನ್ ಕಲೆ ಹಾಕಿದರು. 18ನೇ ಓವರ್ನಲ್ಲಿ ಫೋರ್ ಮತ್ತು ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಅಬ್ಬರಿಸಿದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಗೆಲ್ಲಲು 21 ರನ್ಗಳು ಬೇಕಿತ್ತು.
Winning moment 🇮🇳#AsiaCup2022 pic.twitter.com/BRo8ByL9mo
— ICC (@ICC) August 28, 2022
19ನೇ ಓವರ್ನಲ್ಲಿ ಮೂರು ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅಲ್ಲದೆ 28 ಎಸೆತಗಳಲ್ಲಿ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕದ ಜೊತೆಯಾಟವಾಡಿದರು. ಅದರಂತೆ ಕೊನೆಯ ಓವರ್ನಲ್ಲಿ ಭಾರತ ತಂಡಕ್ಕೆ ಕೇವಲ 7 ರನ್ಗಳ ಅವಶ್ಯಕತೆಯಿತ್ತು. ಆದರೆ ನವಾಜ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲೇ ರವೀಂದ್ರ ಜಡೇಜಾ ಔಟಾದರು. 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ (33) ಭಾರತಕ್ಕೆ 5 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಏಷ್ಯಾಕಪ್ನಲ್ಲಿ ಪಾಕಿಸ್ತಾನದ ಮೇಲೆ ಭಾರತ ಮತ್ತೊಮ್ಮೆ ಸವಾರಿ ಮಾಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post