ಬಾಲ್ಯದಲ್ಲಿ ನಡೆದ ಅವಘಡ : ಅದು 1965ರ ಇಸವಿ. ಆಗ ಪ್ರೇಮಾ ಅವರಿಗೆ ಎಂಟು ವರ್ಷ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಂದು ಪ್ರೇಮಾ ಅವರ ಕುಟುಂಬಕ್ಕೆ ಆಘಾತವೊಂದು ಅಗ್ನಿ ಅವಘಡದ ರೂಪದಲ್ಲಿ ಎದುರಾಗಿತ್ತು. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕ ಪುಟ್ಟ ಪ್ರೇಮಾ ಅವರ ದೇಹದ ಮೇಲೆ ವ್ಯಾಪಿಸಿತ್ತು. ಶೇ. 50ರಷ್ಟು ಸುಟ್ಟ ಗಾಯಗಳೊಂದಿಗೆ ಪ್ರೇಮಾ ನೋವಿನಿಂದ ಒಡ್ಡಾಡುತ್ತಿದ್ದರು. ಸ್ಟವ್ ಸಿಡಿದು ಅವರ ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್ ಧನರಾಜ್ ಹಾಗೂ ತಾಯಿ ರೋಸಿ ಧನರಾಜ್ ತಮಿಳುನಾಡಿನ ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದರು. ಪವಾಡ ಸದೃಶ ಎಂಬಂತೆ ಪ್ರೇಮಾ ಅವರು ಚೇತರಿಸಿಕೊಳ್ಳತೊಡಗಿದರು. ಆತ್ಮ ವಿಶ್ವಾಸದಿಂದ, ಮನೋಧೈರ್ಯದಿಂದ ಪರಿಸ್ಥಿತಿಯನ್ನು ಮೆಟ್ಟಿನಿಂತು ಬದುಕಿನತ್ತ ಹೊರಳಿದರು.
ಮನೆಯಲ್ಲಿ ನಾನು ಹಿರಿಯ ಮಗಳಾಗಿದ್ದು, ನನಗೆ ಅಡುಗೆ ಮಾಡಲು ತಿಳಿದಿತ್ತು. ಪಂಪ್ ಸ್ಟೌವ್ ಆಗಿದ್ದರಿಂದ ಬೆಂಕಿ ಹತ್ತಿಸಲು ಕಷ್ಟವಾಗುತ್ತಿತ್ತು. ಸೀಮೆಎಣ್ಣೆ ಖಾಲಿಯಾಗಿರಬಹುದು ಎಂದು ಎಣ್ಣೆಯನ್ನು ಹಾಕಿದ್ದೆ. ಆದರೆ, ಈ ವೇಳೆ ಸ್ಟೌವ್ ಸ್ಫೋಟಗೊಂಡಿತ್ತು. ಕ್ಷಣಾರ್ಧರದಲ್ಲಿ ಬೆಂಕಿ ದೇಹವನ್ನು ಹೊತ್ತಿಕೊಂಡಿತ್ತು. ನೆರೆಮನೆಯವರು ಬೆಂಕಿ ನಂದಿಸಿದರು. ಘಟನೆ ಬಳಿಕ ನನ್ನ ತುಟಿ ಎದೆಗೆ ತಾಗುತ್ತಿತ್ತು, ಕುತ್ತಿಗೆ ನಿಲ್ಲುತ್ತಿರಲಿಲ್ಲ. ಬೆಂಗಳೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದೆ. ನಂತರ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (CMC) ನಲ್ಲಿ ಚಿಕಿತ್ಸೆ ಪಡೆದುಕೊಂಡೆ. ಪ್ರತಿ ಶಸ್ತ್ರಚಿಕಿತ್ಸೆಯ ಮೊದಲ ಹಾಗೂ ನಂತರ ಮೂರು ದಿನಗಳು ಕಣ್ಣೀರಿನಲ್ಲಿ ಮುಳುಗುತ್ತಿದ್ದೆ. ಮೂರು ಶಸ್ತ್ರಚಿಕಿತ್ಸೆಗಳು ವಿಫಲವಾಗಿತ್ತು. ನಾಲ್ಕನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಇದು ನನ್ನ ಹಣೆಬರಹವನ್ನೇ ಬದಲಿಸಿತ್ತು. 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಇದಾಗಿತ್ತು. ನಂತರ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿಯೇ ನಾನು ವೈದ್ಯೆಯಾಗಬೇಕೆಂದು ನನ್ನ ತಾಯಿ ಬಯಸಿದ್ದರು.
ಪ್ಲಾಸ್ಟಿಕ್ ಸರ್ಜನ್ : ಬಳಿಕ ಪ್ರೇಮಾ ತಮ್ಮ ತಾಯಿಯ ಆಶಯದಂತೆ ಸಮಾಜ ಸೇವೆಗಾಗಿ ಜೀವನವನ್ನೇ ಮುಡಿಪಿಟ್ಟರು. ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಸೀಟು ಗಿಟ್ಟಿಸಿಕೊಂಡರು. ಮುಂದೆ ಅವರ ಆಸಕ್ತಿಯ ಸರ್ಜರಿ ವಿಭಾಗವನ್ನು ಅಧ್ಯಯನ ಮಾಡಿ ಪ್ಲಾಸ್ಟಿಕ್ ಸರ್ಜನ್ (Plastic Surgeon) ಆಗಿ ಹೊರ ಹೊಮ್ಮಿದರು. ಅಮೆರಿಕಾದಲ್ಲಿ, ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನಸಿನಂತೆ ದೇಶದ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಆಗಿ ಗುರುತಿಸಿಕೊಂಡರು.
ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭಿಸಿದ ಪ್ರೇಮಾ ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೂಡ ಸೇವೆ ಸಲ್ಲಿಸಿದರು. ಪ್ರೇಮಾ 1999ರಲ್ಲಿ ಅಗ್ನಿ ರಕ್ಷಾ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಸ್ಥಾಪಿಸಿ ಸುಟ್ಟ ಗಾಯಾಳುಗಳ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ. ಇದುವರೆಗೆ ಅವರು ಸುಮಾರು 25,000ಕ್ಕೂ ಹೆಚ್ಚು ಸುಟ್ಟಗಾಯಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಹುಟ್ಟಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ನಿಸ್ವಾರ್ಥ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post