ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಗ್ರಾಮ ಕರಣಿಕರಿಗೆ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು. ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು.


ಪಕ್ಷೇತರ ಸದಸ್ಯ ಹರೀಶ್ ರಾವ್ ಮಾತನಾಡಿ ಯಾರ್ಯಾರೋ ಬಂದವರು ಸರಕಾರಿ ಜಾಗವನ್ನ ಕಬಳಿಸಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಬಡವರಿಗೆ ನಿವೇಶನಗಳನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಪಟ್ಟಣ ಪಂಚಾಯತ್ ಅಧ್ಯಕ್ಷರೇ ಮುಂದೆ ನಿಂತು ಬಡವರಿಗೆ ನಿವೇಶನ ಕೊಡಿಸುವ ಕಾರ್ಯ ನಡೆಸಬೇಕಿದೆ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸರಕಾರಿ ನಿವೇಶನಗಳ ಸರ್ವೆ ನಂಬರ್ ಹಾಕಿ ಪಟ್ಟಣ ಪಂಚಾಯತ್ ಹೆಸರಿಗೆ ವರ್ಗಾವಣೆ ಮಾಡುವಂತೆ ತಹಸೀಲ್ದಾರ್ ಗೆ ಅರ್ಜಿ ಕೊಟ್ಟಿದ್ದೇವೆ. ಈ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಎಲ್ಲಾ ಪಟ್ಟಣ ಸದಸ್ಯರ ಸಭೆಯನ್ನು ಕರೆದು ಚರ್ಚಿಸುವ ಭರವಸೆ ನೀಡಿದ ಮೇರೆಗೆ ಪಂಚಾಯತ್ ಸದಸ್ಯರು ಪ್ರತಿಭಟನೆ ಹಿಂಪಡೆದರು.
ನಡುಕುಮೇರುವಿನ ಸರಕಾರಿ ಜಾಗವನ್ನ ಅತಿಕ್ರಮಿಸಿ ಕಟ್ಟಿರುವ ಮನೆಗಳನ್ನ ನೆಲಸಮಗೊಳಿಸಲು ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಸರಕಾರಿ ಜಾಗದ ಅಕ್ರಮ ಕಟ್ಟಡಗಳನ್ನ ನೆಲಸಮಗೊಳಿಸಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ಕೇಳಿಬಂತು. ಸರಕಾರಿ ಜಾಗದ ಅತಿಕ್ರಮಣ ಬಗ್ಗೆ ಧ್ವನಿ ಎತ್ತಿದರೆ ಆ ವಿಚಾರವನ್ನ ಸೋರಿಕೆ ಮಾಡಲಾಗುತ್ತದೆ. ಪಂಚಾಯತ್ಗೆ ಮೀಸಲಿಟ್ಟ ಸರಕಾರಿ ನಿವೇಶನವನ್ನು ಉಳಿಸುವುದು ನಮ್ಮ ಜವಾಬ್ದಾರಿಯೇ ಹೊರತು ವೈಯಕ್ತಿಕ ಹಿತಾಸಕ್ತಿ ಇಲ್ಲವೆಂದು ಸುಜಿತ್ ಹೇಳಿದರು.
ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಮಾಲಿನಿ, ನಾವು ಪಂಚಾಯತ್ ನಿರ್ಣಯ ಅಥವಾ ಅರ್ಜಿಗಳ ಬಗ್ಗೆ ಹೊರಗಿನವರಿಗೆ ಮಾಹಿತಿ ಸೋರಿಕೆ ಮಾಡುವುದಿಲ್ಲ. ಅಧಿಕಾರಿಗಳ ಹಾಜರಾತಿ ಕೊರತೆಯಿಂದ ನಡುಕುಮೇರಿನ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿಲ್ಲವೆಂದು ಅಸಹಾಯಕತೆ ತೋಡಿಕೊಂಡರು.
ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post