ಕಾಪು: ಕಳೆದ ಮೇ ತಿಂಗಳಲ್ಲಿ ಬೆಂಗಳೂರು ಉಡುಪಿ ರೈಲಿನಲ್ಲಿ ಉಡುಪಿಗೆ ಬರುತ್ತಿದ್ದ ರಾಧಿಕಾ ಎಂಬವರ ಬ್ಯಾಗ್‌ನೊಳಗಿನ ಪರ್ಸ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ. ಕಳೆದ ಮೇ 22ರಂದು ಬೆಂಗಳೂರು ಯಲಹಂಕ ನಿವಾಸಿ ರಾಧಿಕಾ ಅವರು ಸಹೋದರ ಹರಿಪ್ರಸಾದ್ ಅವರೊಂದಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಡುಪಿಗೆ ಆಗಮಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ರಾಧಿಕಾ ಅವರು ರಾತ್ರಿ ಮಲಗುವ ವೇಳೆ ಚಿನ್ನದ ಒಡವೆಗಳಿದ್ದ ಪರ್ಸನ್ನು ಬ್ಯಾಗಿನಲ್ಲಿ ಇಟ್ಟು ಆ ಬ್ಯಾಗನ್ನು ತಮ್ಮ ತಲೆಯ ಪಕ್ಕದಲ್ಲಿ ಇಟ್ಟು ಮಲಗಿದ್ದು ಮೇ 23ರಂದು ಬೆಳಿಗ್ಗೆ 4.25ಕ್ಕೆ ಎಚ್ಚರಗೊಂಡು ಬ್ಯಾಗ್ ನೋಡಿದಾಗ ಚಿನ್ನದ ಒಡವೆಗಳಿದ್ದ ಪರ್ಸ್ ಮತ್ತು ಅದರ ಜತೆಯಲ್ಲಿ ಕವರ್‌ನಲ್ಲಿದ್ದ ಹಣ ಕಾಣೆಯಾಗಿತ್ತು. ರೈಲು ಆಗಷ್ಟೇ ಮೂಲ್ಕಿ ನಿಲ್ದಾಣ ಬಿಟ್ಟಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರ್ಸ್‌ನಲ್ಲಿದ್ದ 22 ಗ್ರಾಂ ತೂಕದ ಹವಳದ ಚಿನ್ನದ ನೆಕ್ಲೇಸ್, 22 ಗ್ರಾಂ ತೂಕದ 2 ಚಿನ್ನದ ಬಳೆಗಳು, 36 ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ ಸೇರಿದಂತೆ 16.69 ಲಕ್ಷ ರೂ. ಮೌಲ್ಯದ 170.4 ಗ್ರಾಂ ಚಿನ್ನಾಭರಣ ಹಾಗೂ 3 ಸಾವಿರ ರೂ. ನಗದು ಕಳವಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕಳ್ಳತನ ಪ್ರಕರಣವು ಮೇ 22ರ ರಾತ್ರಿ ಮತ್ತು ಮೇ 23ರ ಬೆಳಗ್ಗಿನ ಜಾವ ನಡೆದಿದ್ದು ರಾಧಿಕಾ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post