ಮಂಗಳೂರು, ಜುಲೈ 29: ಕನ್ನಡ, ತುಳು, ಕೊಂಕಣಿ ಭಾಷೆಯ ಚಲನಚಿತ್ರ, ಧಾರಾವಾಹಿಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ, ವಿನ್ನಿ ಫೆರ್ನಾಂಡಿಸ್ (63) ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಕನ್ನಡ, ತುಳು, ಕೊಂಕಣಿ ಚಿತ್ರಗಳಲ್ಲಿ ನಟಿಸಿದ್ದ ವಿನ್ನಿ ಫೆರ್ನಾಂಡಿಸ್ ಕರಾವಳಿಯ ಸಿನಿ ಕಲಾವಿದರಲ್ಲಿ ಚಿರಪರಿಚಿತರು. ಕನ್ನಡ, ಕೊಂಕಣಿ ಧಾರಾವಾಹಿಗಳಲ್ಲೂ ವಿನ್ನಿ ನಟಿಸಿದ್ದರು. ಕೊಂಕಣಿ ನಾಟಕಗಳಲ್ಲಿ ಅಭಿನಯ ಆರಂಭಿಸಿದ್ದ ಅವರು ಬಳಿಕ ತುಳು, ಕನ್ನಡ ನಾಟಕಗಳಲ್ಲೂ ಕಾಣಿಸಿಕೊಂಡಿದ್ದರು. ಆನಂತರ ಚಲನಚಿತ್ರಗಳು ಹೆಚ್ಚಿದಾಗ ಚಿತ್ರೋದ್ಯಮದಲ್ಲಿ ಛಾಪು ಒತ್ತಿದ್ದರು.
ಚಲನಚಿತ್ರ ಮತ್ತು ನಾಟಕ ರಂಗದಲ್ಲಿ ನೀಡಿರುವ ಸೇವೆಗಾಗಿ ವಿನ್ನಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಅವರು ಪತಿ ವಿನ್ಸೆಂಟ್, ಮಕ್ಕಳಾದ ಪ್ರತಾಪ್ ಮತ್ತು ಬಬಿತಾ ಅವರನ್ನು ಅಗಲಿದ್ದಾರೆ.