ಕೊಚ್ಚಿ: ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಕೇರಳ ಸಮಾಜವು ಆಘಾತಕ್ಕೊಳಗಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಿಂದ ವಲಸೆ ಕಾರ್ಮಿಕರು ಅಪಹರಿಸಿದ ನಂತರ ಅಮಾನುಷವಾಗಿ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅಸ್ಸಾಂ ನಿವಾಸಿ ಅಶ್ಪಾಕ್ ಆಲಂ ಬಂಧಿತ ಆರೋಪಿ.
ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಶವಪರೀಕ್ಷೆ ವರದಿಯನ್ನು ಉಲ್ಲೇಖಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ಶವ ಇಂದು ಸಮೀಪದ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ತ್ಯಾಜ್ಯ ಎಸೆಯುವ ನಿರ್ಜನ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಬಾಲಕಿ ನಾಪತ್ತೆಯಾಗಿದ್ದು, ಆ ವ್ಯಕ್ತಿಯನ್ನು ತಡರಾತ್ರಿ ಬಂಧಿಸಲಾಗಿದೆ.
ನಾವು ರಾತ್ರಿ 7.10 ಕ್ಕೆ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಮೊದಲು ಎಫ್ಐಆರ್ ದಾಖಲಿಸಲಾಗಿದೆ. ನಮ್ಮ ತಂಡವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿತು ಮತ್ತು ಮಗು ಕಾರ್ಮಿಕನೊಂದಿಗೆ ಇರುವುದು ಕಂಡುಬಂದಿದೆ. ನಾವು ಅವನನ್ನು ರಾತ್ರಿ 9.30 ಕ್ಕೆ ಬಂಧಿಸಿದ್ದೇವೆ. ಆದರೆ, ಅವನು ಕುಡಿದ ಮತ್ತಿನಲ್ಲಿದ್ದನು. ಮಗು ಅವನೊಂದಿಗೆ ಇರಲಿಲ್ಲ” ಎಂದು ಎರ್ನಾಕುಲಂ ಗ್ರಾಮಾಂತರ ಎಸ್ಪಿ, ವಿವೇಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಬಿಹಾರದಿಂದ ವಲಸೆ ಬಂದ ದಂಪತಿಯ ಮಗು ಶುಕ್ರವಾರ ಸಂಜೆ ಇಲ್ಲಿನ ಗ್ಯಾರೇಜ್ ಜಂಕ್ಷನ್‌ನಲ್ಲಿರುವ ತನ್ನ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ತ್ಯಾಜ್ಯ ಎಸೆಯುವ ನಿರ್ಜನ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಎಸೆದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ, ಲೈಂಗಿಕ ಕಿರುಕುಳ ನೀಡಲಾಯಿತು ಮತ್ತು ಆರೋಪಿಗಳು ದೇಹವನ್ನು ಮುಚ್ಚಲು ಕಸ ಮತ್ತು ಗೋಣಿಚೀಲಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಮಗುವಿನ ಕುಟುಂಬ ವಾಸಿಸುತ್ತಿದ್ದ ಕಟ್ಟಡದ ಮೊದಲ ಮಹಡಿಯ ಕೊಠಡಿಯಲ್ಲಿ ತಂಗಿದ್ದ ಬಿಹಾರ ಮೂಲದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಪಾನಮತ್ತನಾಗಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸುವುದು ಮತ್ತು ವಿವರಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. “ಇಂದು ಬೆಳಿಗ್ಗೆ, ಅವರು ಅಪರಾಧವನ್ನು ಒಪ್ಪಿಕೊಂಡರು. ಆದರೆ, ಅವರು ತನಿಖಾ ತಂಡವನ್ನು ದಾರಿತಪ್ಪಿಸಲು ಪ್ರಯತ್ನಿಸಿದರು” ಎಂದು ಕೊಚ್ಚಿ ರೇಂಜ್ ಡಿಐಜಿ, ಶ್ರೀನಿವಾಸ್ ಎ ಸುದ್ದಿಗಾರರಿಗೆ ತಿಳಿಸಿದರು.
ವಿಧಿವಿಜ್ಞಾನ ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಬಳಿಕ ಮೃತದೇಹವನ್ನು ಕಳಮಶ್ಶೇರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ, ಬಾಲಕಿ ಧರಿಸಿದ್ದ ಬನಿಯನ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಮಗುವಿನ ಖಾಸಗಿ ಭಾಗ ಸೇರಿದಂತೆ ದೇಹದ ಮೇಲೆ ಗಾಯಗಳು ಪತ್ತೆಯಾಗಿದೆ. ಫೋರೆನ್ಸಿಕ್ ವರದಿಯ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಆರೋಪ ಹೊರಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಶ್ಪಾಕ್ ಆಲಂ 2 ದಿನ ಹಿಂದೆ ವಾಸಕ್ಕೆ ಬಂದಿದ್ದ. ಶುಕ್ರವಾರ ಸಂಜೆ ಬಾಲಕಿಗೆ ಜ್ಯೂಸ್ ನೀಡಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ತ್ಯಾಜ್ಯ ರಾಶಿಯಲ್ಲಿ ಹಾಕಿ ಅದರ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಪರಾರಿಯಾಗಿದ್ದಾನೆ.
ಬಾಲಕಿಯ ಮೃತ ದೇಹ ಪತ್ತೆಯಾದ ಸುದ್ದಿ ಹಬ್ಬುತ್ತಿದ್ದಂತೆ ಮಾರುಕಟ್ಟೆ ಪ್ರದೇಶದಲ್ಲಿ ಜನ ಜಮಾಯಿಸಿದ್ದಾರೆ. ಇದೇ ವೇಳೆ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದರೂ ಸ್ಥಳೀಯರ ಪ್ರತಿಭಟನೆಯಿಂದ ವಾಪಸ್ ಕರೆದೊಯ್ದಿದ್ದಾರೆ. ಬಾಲಕಿಯನ್ನು ತಾನೊಬ್ಬನೇ ಕೊಲೆ ಮಾಡಿರುವುದಾಗಿ ಅಶ್ಪಾಕ್ ಹೇಳಿಕೆ ನೀಡಿದ್ದರೂ ಪೊಲೀಸರು ಅದನ್ನು ನಂಬಿಲ್ಲ. ಶುಕ್ರವಾರ ಸಂಜೆ ಅಶ್ಪಾಕ್ ಬಾಲಕಿಯೊಂದಿಗೆ ಮಾರುಕಟ್ಟೆಗೆ ಬಂದಿದ್ದಾನೆ. ಬಾಲಕಿಯ ಬಗ್ಗೆ ಆತನನ್ನು ಪ್ರಶ್ನಿಸಿದಾಗ ತನ್ನ ಮಗಳೆಂದು ಹೇಳಿಕೊಂಡಿದ್ದ ಎಂದು ಮಾರುಕಟ್ಟೆ ಕಾರ್ಮಿಕರು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post