ಕಡಬ: ಉದನೆಯಲ್ಲಿ ಸುಮಾರು 24 ವರ್ಷಗಳ ಹಿಂದೆ ಗುಂಡ್ಯ ಹೊಳೆಗೆ ನಿರ್ಮಾಣ ಗೊಂಡಿ ರುವ ತೂಗುಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಕಾಂಕ್ರೀಟ್ ಹಲಗೆ ನಾಲ್ಕೈದು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ. ದುರಸ್ತಿಗೆ ಆಗ್ರಹ ವ್ಯಕ್ತವಾಗಿದೆ.
ಶಿರಾಡಿ ಹಾಗೂ ಕೊಣಾಜೆ ಗ್ರಾಮ ಸಂಪರ್ಕಕ್ಕೆ ಈ ಭಾಗದ ಜನರು ಸುತ್ತು ಬಳಸಿ ಬರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಜನರ ಬೇಡಿಕೆಯಂತೆ 1997ರಲ್ಲಿ ತೂಗು ಸೇತುವೆ ನಿರ್ಮಾಣಗೊಂಡಿತ್ತು. ತೂಗು ಸೇತುವೆ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್ ಅವರು ಈ ತೂಗು ಸೇತುವೆ ನಿರ್ಮಾಣ ಮಾಡಿದ್ದಾರೆ. ಅವರ 2ನೇ ತೂಗು ಸೇತುವೆ ಇದಾಗಿದೆ. ಈಗ ತೂಗು ಸೇತುವೆ ನಿರ್ಮಾಣಗೊಂಡು ಬರೋಬ್ಬರಿ 24 ವರ್ಷಗಳಾಗುತ್ತಿದೆ.
ಶಿರಾಡಿ ಗ್ರಾಮದ ಉದನೆ ಪೇಟೆಯಿಂದ ಕೊಣಾಜೆ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ತೂಗುಸೇತುವೆ 24 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಈ ತೂಗುಸೇತುವೆ ಮೂಲಕ ದಿನಂಪ್ರತಿ ನೂರಾರು ಜನರು, ನೂರಾರು ಬೈಕ್ ಸವಾರರು, ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ಈ ತೂಗುಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಇನ್ನಷ್ಟೇ ಮುಕ್ತವಾಗಬೇಕಾಗಿದೆ. ಅಲ್ಲಿಯವರೆಗೆ ಈ ತೂಗುಸೇತುವೆಯಲ್ಲಿ ಅಪಾಯಕಾರಿ ನಡಿಗೆ ತಪ್ಪಿದಲ್ಲ.
ಬಿರುಕುಬಿಟ್ಟ ಹಲಗೆ: ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ಮೂಲಕ ನದಿ ನೀರು ಕಾಣಿಸುತ್ತಿದೆ. ಜನರು ಓಡಾಟ ನಡೆಸುವ ವೇಳೆ ಆಯತಪ್ಪಿ ಹಲಗೆಯಲ್ಲಿ ಕಾಲು ಸಿಲುಕಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ತೂಗುಸೇತುವೆಯ ಎರಡೂ ಬದಿಗೆ ಹಾಕಲಾಗಿರುವ ಕಬ್ಬಿಣದ ರಕ್ಷಣೆ ಅಲ್ಲಲ್ಲಿ ತುಕ್ಕು ಹಿಡಿದಿವೆ. ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ಬದಲಾಯಿಸಿ ಹೊಸ ಹಲಗೆ ಅಳವಡಿಸಬೇಕಾಗಿದೆ ಎನ್ನುತ್ತಾರೆ ಈ ಸೇತುವೆ ಅವಲಂಬಿತರು.
ನಾಲ್ಕು ವರ್ಷದ ಹಿಂದೆ ತೂಗುಸೇತುವೆಯ ಕೆಲವು ಕಡೆಗಳ ಕಾಂಕ್ರೀಟ್ ಹಲಗೆ ಬಿರುಕು ಬಿಟ್ಟಿತ್ತು. ಇದನ್ನು ಕೊಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಸರಿಪಡಿಸಲಾಗಿತ್ತು. ಕಳೆದ ವರ್ಷವೂ ಈ ತೂಗುಸೇತುವೆಯ ಹಲಗೆ ಮುರಿದು ಹೋಗಿತ್ತು. ಈ ವೇಳೆ ಯಾವುದೇ ಇಲಾಖೆಯಿಂದ ಸ್ಪಂದನೆ ಸಿಗದೇ ಇದ್ದಾಗ ಊರಿನವರೇ ಸೇರಿಕೊಂಡು ಧನ ಸಂಗ್ರಹಿಸಿ ಹಲಗೆ ಅಳವಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post