ಮಂಗಳೂರು, ಅ.30: ರಾ.ಹೆ.66ರ ಉಳ್ಳಾಲದ ಸೇತುವೆಯಿಂದ ಸೋಮವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಮೂಲದ ವ್ಯಾಪಾರಿಯ ಮೃತದೇಹ ಸಂಜೆಯ ವೇಳೆಗೆ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ (40 ) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ವ್ಯಾಪಾರದ ಹಣ ಬರಲು ಇದೆ, ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.ಇವರು ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಪತ್ತೆಯಾದ ಚಾಲನಾ ಪರವಾನಿಗೆಯ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿತ್ತು. ಅಲ್ಲದೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು.
ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಪೋಟೋ ತೆಗೆದು ಮಾಹಿತಿ ಹಂಚಿಕೊಂಡಿದ್ದು, ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿದೆ. ಸಂಜೆಯ ವೇಳೆಗೆ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ. ಪ್ರಸನ್ನ ಅವರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ.
ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತತ್ ಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post