ಬೆಂಗಳೂರು, ಅ.30: 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ ವಿವಿಧ ಕ್ಷೇತ್ರಗಳ ಸಾಧಕರ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಆಯ್ಕೆ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಟಿ ಕರೆದು ಘೋಷಣೆ ಮಾಡಿದ್ದಾರೆ. ಕಲೆ, ಸಾಹಿತ್ಯ, ಜಾನಪದ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿ ಒಟ್ಟು 69 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಯೋಧ್ಯೆ ರಾಮಲಲ್ಲಾ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್, ಯಕ್ಷಗಾನ ಕ್ಷೇತ್ರದಲ್ಲಿ ಸೀತಾರಾಮ ತೋಳ್ಪಾಡಿ, ಸಾಹಿತ್ಯದಲ್ಲಿ ಡಾ.ಎಂ. ವೀರಪ್ಪ ಮೊಯ್ಲಿ, ಡಾ. ಪ್ರಶಾಂತ ಮಾಡ್ತ, ಮಂಗಳೂರು ಮೂಲದ ದುಬೈ ಉದ್ಯಮಿ ಡಾ. ತುಂಬೆ ಮೊಯ್ದೀನ್ ಸೇರಿದಂತೆ 69 ಸಾಧಕರನ್ನು ಆಯ್ಕೆ ಮಾಡಲಾಗಿದ್ದು ನವೆಂಬರ್ 1ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ವಿಕಾಸಸೌಧದಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಹೆಸರುಗಳ ಪಟ್ಟಿ ಪ್ರಕಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಯ ಮೊತ್ತ 5 ಲಕ್ಷ ಹಾಗೂ 25 ಗ್ರಾಂ ಚಿನ್ನದ ಪದಕ, ಸುವರ್ಣ ಸಂಭ್ರಮ ಪ್ರಶಸ್ತಿಯ ಮೊತ್ತ ₹ 50,000 ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post