ಬೆಂಗಳೂರು : ಯುವತಿಯೊಬ್ಬಳನ್ನ ಹತ್ಯೆ ಮಾಡಿ ಪರಾರಿಯಾಗಿದ್ದ ಆಕೆಯ ಪ್ರಿಯಕರನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಗುವಾಹಟಿ ಮೂಲದ ಮಾಯಾ ಗೊಗೋಯ್ (19) ಎಂಬಾಕೆಯನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಆರವ್ ಹನೋಯ್ ಎಂಬಾತನನ್ನು ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಬಂಧಿಸಲಾಗಿದೆ. ಇಂದಿರಾನಗರ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ಮಾಯಾ ಗೊಗೋಯ್ ಎಂಬಾಕೆಯನ್ನ ಹತ್ಯೆ ಮಾಡಿರುವ ಘಟನೆ ನವೆಂಬರ್ 26ರಂದು ಬೆಳಕಿಗೆ ಬಂದಿತ್ತು.
ನವೆಂಬರ್ 23 ರಂದು ಇಂದಿರಾನಗರ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ಮಾಯಾ ಗೊಗೋಯ್ ಹಾಗೂ ಆಕೆಯ ಸ್ನೇಹಿತ ಆರವ್ ಹನೋಯ್ ರೂಮ್ ಪಡೆದು ತಂಗಿದ್ದರು. ಆದರೆ ಮಾಯಾಳನ್ನ ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಆರವ್ ಹನೋಯ್, ನವೆಂಬರ್ 26ರಂದು ಬೆಳಿಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಅಪಾರ್ಟ್‌ಮೆಂಟ್‌ನಿಂದ ತೆರಳಿದ್ದಾನೆ. ಹೋಟೆಲ್ ಸಿಬ್ಬಂದಿ ರೂಮ್ ಗಮನಿಸಿದಾಗ ಮಾಯಾಳ ಹತ್ಯೆಯಾಗಿರುವ ವಿಚಾರ ಬಯಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಮಾಹಿತಿ: ”ಹತ್ಯೆಯಾದ ಮಾಯಾ ಗೊಗೋಯ್ ಜಯನಗರ ಹಾಗೂ ಹೆಚ್ಎಸ್ಆರ್ ಲೇಔಟ್‌ನಲ್ಲಿರುವ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕೇರಳ ಮೂಲದ ಆರೋಪಿ ಆರವ್ ಹನೋಯ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ. ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾಗಿತ್ತು. ನವೆಂಬರ್ 23ರಂದು ಮಾಯಾ ಹಾಗೂ ಆರವ್ ಇಂದಿರಾನಗರ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ರೂಮ್ ಪಡೆದಿದ್ದರು. ನಂತರ ವೈಯಕ್ತಿಕ ಕಾರಣಗಳಿಂದ ಇಬ್ಬರ ನಡುವೆ ಗಲಾಟೆಯಾಗಿತ್ತು. ಆನ್‌ಲೈನ್‌ನಲ್ಲಿ ನೈಲಾನ್ ಹಗ್ಗ ಹಾಗೂ ಚಾಕು ತರಿಸಿಕೊಂಡಿದ್ದ ಆರೋಪಿ, ಮಾಯಾಳನ್ನು ಇರಿದು ಹತ್ಯೆಗೈದಿದ್ದ. ಬಳಿಕ ಮಾರನೆ ದಿನ ಬೆಳಿಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಅಪಾರ್ಟ್‌ಮೆಂಟ್‌ನಿಂದ ತೆರಳಿದ್ದ” ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.
”ಬಳಿಕ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ, ವಾರಣಾಸಿಗೆ ತೆರಳಿ ಬಳಿಕ ಬೆಂಗಳೂರಿಗೆ ವಾಪಸಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹತ್ಯೆ ಪ್ರಕರಣ ವರದಿಯಾದ ಬಳಿಕ ಆರೋಪಿಯ ಪತ್ತೆಗಾಗಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಲಾಗಿದ್ದು, ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ನಾಳೆ ಆರೋಪಿಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲಾಗುವುದು” ಎಂದು ಡಿಸಿಪಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post