ಬಂಟ್ವಾಳ: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ. ಬಿಸಿರೋಡಿನ ಕೈಕಂಬ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು. ಇಲ್ಲಿನ ಸ್ಥಳೀಯ ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ.
ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಈಕೆ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.
ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಫ್ಟ್ ಕಾರು ಚೈತ್ರಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇವಳನ್ನು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್ ಹಾಗೂ ಹೆಚ್.ಸಿ.ರಮೇಶ್ ಖಾಸಗಿ ವಾಹನದ ಮೂಲಕ ಗಾಯಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರ ಗಾಯಗೊಂಡ ಈಕೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ಈಕೆ ಮೃತಪಟ್ಟ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಮನೆಯೊಂದರ ಕಾಂಪೌಂಡ್ ಗೆ ಕೂಡ ಗುದ್ದಿ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರು ಚಾಲಕ ಹಾಗೂ ಆತನ ಜೊತೆಯಿದ್ದ ಮೂವರು ಸಹ ಪ್ರಯಾಣಿಕ ಪರಾರಿಯಾಗಿದ್ದು, ಮಲ್ಲೂರು ಕಡೆ ಹೋಗುವವರು ಎಂದು ಹೇಳಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೈತ್ರಾ ಮೇಕಪ್ ಕಲಾವಿದರಾಗಿದ್ದ ದಿ. ಭಾಸ್ಕರ್ ಆಚಾರ್ಯ ಅವರ ಮಗಳಾಗಿದ್ದು ಮಂಗಳೂರಿನ ಪ್ರಸಿದ್ದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ಚೈತ್ರಾಗೆ ಮದುವೆ ನಿಶ್ಚಿತಾರ್ಥ ನಡೆದಿದ್ದು ಮುಂದಿನ ಮಾರ್ಚ್ 3ರಂದು ಕೊಡ್ಯಡ್ಕದ ಯುವಕನ ಜೊತೆ ಮದುವೆ ನಿಗದಿಯಾಗಿತ್ತು. ಯುವಕರು ಕಾರನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿದ್ದು ಅಪಘಾತಕ್ಕೆ ಕಾರಣವಾಗಿತ್ತು. ಮಾದಕ ದ್ರವ್ಯ ಸೇವಿಸಿದ್ದರಿಂದ ಈ ರೀತಿ ಘಟನೆ ಆಗಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post