ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್, ‘ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಿ ಸೂಕ್ತ ಶಿಫಾರಸಿನೊಂದಿಗೆ ವರದಿ ನೀಡಲು ಡಾ. ಮೋಹನ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಅಲ್ಲದೆ, ಒಂದು ವಾರದಲ್ಲಿ ವರದಿ ನೀಡಲು ಈ ಸಮಿತಿಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕೆಂದು ತುಳು ಭಾಷಿಕರು ಅನೇಕ ವರ್ಷಗಳಿಂದ ಬೇಡಿಕೆ ಮುಂದಿಡುತ್ತಲೇ ಇದ್ದಾರೆ. ರಾಜ್ಯದ ಸಂಸದರು ಹಲವು ಬಾರಿ ಈ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದರು.
ಸಮಿತಿಯಲ್ಲಿ ಮೂಡುಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಡಾ.ಮೋಹನ ಆಳ್ವ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಮಂಗಳೂರು ವಿವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಾಧವ ಕೋಣಾಜೆ, ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಪೃಥ್ವಿ ಕವತ್ತಾರು ಮಣಿಪಾಲ, ವಸಂತ ಶೆಟ್ಟಿ ಉಡುಪಿ, ಹಿರಿಯ ಕಥೆಗಾರ ಚಂದ್ರಹಾಸ ಕಣಂತೂರು, ಅಲೋಶಿಯಸ್ ಪ್ರೌಢಶಾಲೆಯ ಶಿಕ್ಷಕಿ ಸಂಧ್ಯಾ ಆಳ್ವ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯೆಂದು ಸಮಿತಿಗೆ ಸೇರಿಸಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆಆರ್ ರಮೇಶ್ ಕುಮಾರ್ ಜನವರಿ 11ರಂದು ಸಹಿ ಮಾಡಿ, ಸಮಿತಿಯು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾಗಿ ಉಲ್ಲೇಖ ಇದೆ.
Discover more from Coastal Times Kannada
Subscribe to get the latest posts sent to your email.
Discussion about this post