ಉಳ್ಳಾಲ : ಕೊಲ್ಯದಲ್ಲಿ ಭಾನುವಾರ ರಾತ್ರಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಯುವಕನೂ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಹಿದಾಯತ್ ನಗರ ನಿವಾಸಿ ಬಾಷರ್ ಅಹಮ್ಮದ್ (22)ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವಕ. ಭಾನುವಾರ ರಾತ್ರಿ ರಾ.ಹೆ. 66ರ ಕೊಲ್ಯ ಸಮೀಪದ ಅಡ್ಕದಲ್ಲಿ ಮಂಗಳೂರಿನಿಂದ ತಲಪಾಡಿಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಜ್ಜುಗುಜ್ಜಾಗಿತ್ತು. ಡಿಕ್ಕಿಯ ತೀವ್ರತೆಗೆ ಕಬ್ಬಿಣದ ವಿದ್ಯುತ್ ಕಂಬವೇ ಧರೆಗುರುಳಿತ್ತು. ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲಕ ಮಂಜೇಶ್ವರ ಉದ್ಯಾವರದ ಹತ್ತನೇ ಮೈಲು ನಿವಾಸಿ ಅಬ್ದುಲ್ ರಿಫಾಯಿ(24) ಮೃತಪಟ್ಟಿದ್ದ.
ಜ.28 ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ತಂದೆಯ ಸಹೋದರನ ಪುತ್ರ ಬಾಷರ್ ಅಹಮ್ಮದ್ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮ ಹಾಗೂ ರೇವತಿ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಕೊಲ್ಯ ಸಮೀಪ ಕಾರು ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.
ಮೃತ ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬವರ ಪುತ್ರನಾಗಿದ್ದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಇನ್ನು ಮೃತ ಬಾಷರ್ ಅಹಮ್ಮದ್ ಸಹೋದರ ರಿಫಾಯಿ ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಸಹಪಾಠಿಗಳ ಜೊತೆಗೆ ಒಟ್ಟಾಗಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post