ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಅಂತರ್ ಜಿಲ್ಲಾ ಕಳ್ಳನನ್ನು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿ ಮಂಗಳೂರಿನ ಬರ್ಕೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಮಹಮ್ಮದ್ ಇಮ್ರಾನ್ ಎನ್.ಎಮ್ (44) ಎಂದು ಗುರುತಿಸಲಾಗಿದೆ.
ಬರ್ಕೆ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜ. 23 ರಂದು ಸಂಜೆ 7 ಗಂಟೆಗೆ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ ರೂ.20,000/- ನಗದು ಹಣ ಇರುವ ಟ್ರಾಲಿ ಬ್ಯಾಗ್ ಇಟ್ಟು ಕುಳಿತುಕೊಂಡಿದ್ದಾಗ ಯಾರೋ ಕಳ್ಳರು ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಕಳವು ಮಾಡಿಕೊಂಡ ಹೋದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಯ ಬಗ್ಗೆ ಪಿಎಸ್ಐ ವಿನಾಯಕ ತೊರಗಲ್, ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತಿಶ್, ಗಾಲಿಬ್ ಅವರಿದ್ದ ತಂಡವು ಕಳವು ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನಾದ, ಮಡಿಕೇರಿಯ ತ್ಯಾಗರಾಜ್ ಕಾಲೋನಿ ನಿವಾಸಿ ಮಹಮ್ಮದ್ ಇಮ್ರಾನ್ (44) ಎಂಬಾತನನ್ನು ಜ.28ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿಯಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿತನಿಂದ ಒಟ್ಟು ರೂ. 6,47,920/- ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ ರೂ.5000/- ನಗದು ಹಣವನ್ನು* ಸ್ವಾಧೀನಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಸದ್ರಿ ಆರೋಪಿ ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುವ ರೂಢಿಗತ ಆರೋಪಿಯಾಗಿದ್ದು ಈತನ ಮೇಲೆ ಒಟ್ಟು 11 ಪ್ರಕರಣಗಳು ವಿವಿಧ ಕಡೆ ದಾಖಲಾಗಿರುತ್ತದೆ. ಆರೋಪಿ ಮೇಲೆ ದುದ್ದ ಪೊಲೀಸ್ ಠಾಣೆಯಲ್ಲಿ-1, ಕೊಮನೂರು ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ-1, ಹಾಸನ ನಗರ ಪೊಲೀಸ್ ಠಾಣೆಯಲ್ಲಿ-1, ಚೆನ್ನರಾಯಪಟ್ಟಣ ನಗರ ಠಾಣೆಯಲ್ಲಿ-1, ಮೈಸೂರು ದೇವರಾಜ ನಗರ ಪೊಲೀಸ್ ಠಾಣೆಯಲ್ಲಿ-1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ -2, ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ-1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೇ ಆರೋಪಿ ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ವಾರೆಂಟ್ ಹೊರಡಿಸಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post