ಮಂಗಳೂರು, ಜ.31 : ಒಂದು ಕಾಲದಲ್ಲಿ ರೋಗ ನಿವಾರಕ ಶಕ್ತಿಯುಳ್ಳ ಪವಿತ್ರ ತೀರ್ಥ ಸರೋವರವೆಂದು ಪೂಜಿಸಲ್ಪಟ್ಟಿದ್ದ ಮಂಗಳೂರಿನ ಐತಿಹಾಸಿಕ ಗುಜ್ಜರಕೆರೆಯ ನೀರು ಇದೀಗ ತೀವ್ರ ಮಲಿನಗೊಂಡಿರುವುದು ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ. ಇತ್ತೀಚೆಗೆ ನಡೆಸಲಾದ ನೀರಿನ ಪರೀಕ್ಷಾ ವರದಿಗಳ ಪ್ರಕಾರ, ಸರೋವರದ ನೀರು ರೋಗಕಾರಕ ಬ್ಯಾಕ್ಟೀರಿಯಾಗಳಿಂದ ಸಂಪೂರ್ಣ ಕಲುಷಿತಗೊಂಡಿದ್ದು, ಸೇವನೆಗೆ ಯೋಗ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತಿದೆ. ಆದರೆ, ಕೆರೆಯ ಒಡಲು ಮಾತ್ರ ಕಲುಷಿತಗೊಂಡಿದೆ. ಈ ಕೆರೆಗೆ ಒಳಚರಂಡಿ ನೀರು ಸೇರುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಸ್ಥಳೀಯ ನಿವಾಸಿಗಳು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೆರೆಯಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಪ್ರತಿ 100 ಮಿಲಿ ನೀರಿನಲ್ಲಿ ಒಟ್ಟು ಕಾಲಿಫಾರ್ಮ್ ಬ್ಯಾಕ್ಟೀರಿಯಾದ ಪ್ರಮಾಣವು 1,600 ರಷ್ಟಿದೆ. ಫೀಕಲ್ ಕಾಲಿಫಾರ್ಮ್ ಪ್ರಮಾಣವೂ 1,600 ರಷ್ಟಿದೆ. 7 ತಿಂಗಳ ಹಿಂದೆ ನಡೆದ ಪರೀಕ್ಷೆಯಲ್ಲಿ ಫೀಕಲ್ ಕಾಲಿಫಾರ್ಮ್ ಪ್ರಮಾಣ 500 ಇತ್ತು. ಆದರೆ ಈಗ ಅದು ಮೂರು ಪಟ್ಟು ಹೆಚ್ಚಾಗುವ ಮೂಲಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. 100 ಮಿಲಿ ನೀರಿನಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಶೂನ್ಯ ಇರಬೇಕು. 1 ರಿಂದ 3 ರಷ್ಟಿದ್ದರೆ ಸಮಾಧಾನಕರ. 4 ರಿಂದ 10 ಇದ್ದರೆ ಕುಡಿಯಲು ಅಷ್ಟೊಂದು ಯೋಗ್ಯವಲ್ಲ. ಪ್ರಮಾಣ 10 ದಾಟಿದರೆ ಅದು ಕುಡಿಯಲು ಯೋಗ್ಯವಲ್ಲ. ಆದರೆ ಗುಜ್ಜರಕೆರೆಯಲ್ಲಿ ಈ ಪ್ರಮಾಣವು 1,600 ಇರುವುದು ಆತಂಕಕ್ಕೆ ಕಾರಣವಾಗಿದೆ.
ಗುಜ್ಜರಕೆರೆಯು ಮಂಗಳೂರಿನ ಅತ್ಯಂತ ಹಳೆಯ ಹಾಗೂ ಧಾರ್ಮಿಕ ಮಹತ್ವ ಹೊಂದಿದ ಸರೋವರಗಳಲ್ಲಿ ಒಂದಾಗಿದೆ. ನಾಥಪಂಥದ ಮಹರ್ಷಿ ಗುರು ಮಚೇಂದ್ರನಾಥರ ಶಿಷ್ಯರಾದ ಗುರು ಗೋರಖನಾಥರ ತಪಸ್ಸಿನಿಂದ ಈ ಸರೋವರ ಉಂಟಾಯಿತು ಎಂಬ ಐತಿಹಾಸಿಕ ನಂಬಿಕೆ ಇದೆ. ಶತಮಾನಗಳ ಕಾಲ ಈ ಪವಿತ್ರ ಸರೋವರದ ತೀರ್ಥವನ್ನು ಬೋಳಾರ ಹಳೆ ಕೋಟೆಯ ಶ್ರೀ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಅಭಿಷೇಕ ಮತ್ತು ವಿಧಿವಿಧಾನಗಳಿಗೆ ಬಳಸಲಾಗುತ್ತಿತ್ತು.
“ಇದೀಗ ಗುಜ್ಜರಕೆರೆ ನೀರು ಶುದ್ಧವಾಗಿಲ್ಲ ಎಂಬುದು ಸಾಬೀತಾಗಿದೆ. ಅಂತರ್ಜಲ ಸಂರಕ್ಷಣೆಗಾಗಿ ಮತ್ತು ಧಾರ್ಮಿಕ ಇತಿಹಾಸ ಹೊಂದಿರುವ ಈ ಪವಿತ್ರ ಕೆರೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ” ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ನೇಮು ಕೊಟ್ಟಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post