ಮಂಗಳೂರು, ಜುಲೈ 30: ಸೌರಾಷ್ಟ್ರ ಬಟ್ಟೆ ಮಳಿಗೆಯ ಮಾಲಕರಿಗೆ ಹಫ್ತಾ ಕೇಳಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಕುಖ್ಯಾತ ರೌಡಿಗಳಾದ ಮೊಹಮ್ಮದ್ ಹನೀಫ್ ಅಲಿಯಾಸ್ ಅಲಿ ಮುನ್ನಾ(40), ವಾಸ: ದೇರ ಹೌಸ್, ಕುರುಡಪದವು ಪೋಸ್ಟ್, ಪೈವಳಿಕೆ ಗ್ರಾಮ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಮತ್ತು ಮೊಹಮ್ಮದ್ ರಫೀಕ್ ಅಲಿಯಾಸ್ ಮುಡಿಪು ರಫೀಕ್ ಅಲಿಯಾಸ್ ರಫೀಕ್(36), ವಾಸ: ಕುಕ್ಕುದಕಟ್ಟೆ ಹೌಸ್, ಮುಡಿಪು ಚರ್ಚಿನ ಹಿಂದೆ ಮನೆ, ಬಾಳೆಪುಣಿ ಗ್ರಾಮ ಮತ್ತು ಅಂಚೆ, ಮುಡಿಪು, ಬಂಟ್ವಾಳ ತಾಲೂಕು. ಹಾಲಿ ವಾಸ: ಬಾಡಿಗೆ ಮನೆ, 1ನೇ ಕ್ರಾಸ್, 3ನೇ ಮೇನ್ ರೋಡ್, ಮುನೀಶ್ವರ ಟೆಂಪಲ್ ಹತ್ತಿರ, ವಿನಾಯಕ ನಗರ, ಹೊಸಕೋಟೆ ಪೋಸ್ಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಂಧಿತ ಆರೋಪಿಗಳು.
ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್ ಇಟ್ಟುಕೊಂಡಿದ್ದ ಆರೋಪಿಗಳನ್ನು ಪೊಲೀಸರು ಮಂಗಳೂರಿನಲ್ಲಿ ಫಳ್ನೀರ್ ನಲ್ಲಿ ಬಂಧಿಸಿದ್ದಾರೆ. ಜುಲೈ 21ರಂದು ಈ ಪೈಕಿ ಮೊಹಮ್ಮದ್ ರಫೀಕ್ ಎಂಬಾತ ಹಂಪನಕಟ್ಟೆಯ ಸೌರಾಷ್ಟ್ರ ಕ್ಲೋತ್ ಸ್ಟೋರ್ ಅಂಗಡಿಗೆ ನುಗ್ಗಿದ್ದು, ಬೆಳಗ್ಗೆ ಶಟರ್ ಓಪನ್ ಮಾಡುತ್ತಿದ್ದಾಗಲೇ ಬೆದರಿಕೆ ಹಾಕಿದ್ದ. ಕಲಿ ಯೋಗೀಶ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ ಯಾಕೆ. ಹಫ್ತಾ ನೀಡದಿದ್ದರೆ ಜೀವ ಉಳಿಸಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಬಟ್ಟೆ ಮಳಿಗೆಯ ಮಾಲಕ ಯಶವಂತ ರಾವಲ್ ಬಂದರು ಠಾಣೆಗೆ ದೂರು ನೀಡಿದ್ದರು.
ಸಿಸಿಟಿವಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಹನೀಫ್ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಕುರುಡಪದವು ನಿವಾಸಿಯಾಗಿದ್ದು, ಮೊಹಮ್ಮದ್ ರಫೀಕ್ ಕೋಣಾಜೆ ಬಳಿಯ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ನಿವಾಸಿ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನೆಲೆಸಿದ್ದ. ಮೊಹಮ್ಮದ್ ರಫೀಕ್ ಜುಲೈ 21ರಂದು ಸೌರಾಷ್ಟ್ರ ಮಳಿಗೆಗೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಆರೋಪಿಗಳ ವಶದಿಂದ ಪಿಸ್ತೂಲ್-1, ರಿವಾಲ್ವರ್-1, 12 ಸಜೀವ ಮದ್ದುಗುಂಡುಗಳು, 42 ಗ್ರಾಂ ಮಾದಕ ವಸ್ತು ಎಂಡಿಎಂಎ, ಇನ್ನೋವಾ ಕಾರು ಹಾಗೂ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕಗಳನ್ನು ವಶಪಡಿಸಲಾಗಿದೆ. ವಶಪಡಿಸಿದ ಸೊತ್ತಿನ ಮೌಲ್ಯ ರೂ. 10 ಲಕ್ಷ ಆಗಬಹುದು.
ಆರೋಪಿಗಳಿಬ್ಬರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾಗಿದ್ದು, ಆರೋಪಿಗಳ ಪೈಕಿ ಮೊಹಮ್ಮದ್ ಹನೀಫ್ ಅಲಿಯಾಸ್ ಅಲಿ ಮುನ್ನಾ ಎಂಬಾತ ಈ ಹಿಂದೆ ಮಂಗಳೂರು ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರು ರಾಜಧಾನಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣ, ಕೇರಳದ ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜಾರಿಯಲ್ಲಿದೆ.
ಇನ್ನೊಬ್ಬ ಆರೋಪಿ ಮೊಹಮ್ಮದ್ ರಫೀಕ್ ಅಲಿಯಾಸ್ ಮುಡಿಪು ರಫೀಕ್ ಎಂಬಾತನ ವಿರುದ್ಧ ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಪಹರಣ ಪ್ರಕರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಹಾಗೂ ಕೇರಳದ ಮಂಜೇಶ್ವರ, ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮಸುಂದರ್ ಹೆಚ್.ಎಂ, ಸಿಸಿಬಿ ಪಿಎಸ್ಐ ಯವರಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್ಐ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post