ಮಂಗಳೂರು: ಬಸ್ ಕಂಡಕ್ಟರ್ ಒಬ್ಬರು ಏಕಾಏಕಿ ಬಸ್ ನಿಂದ ಹೊರ ಬಿದ್ದು ಸಾವನ್ನಪ್ಪಿದ್ದ ಬೆನ್ನಲ್ಲೇ ಗುರುವಾರ ಪೊಲೀಸರು ಬಸ್ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿ ಫುಟ್ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮತ್ತೊಂದು ಸುತ್ತಿನ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್ಬೋರ್ಡ್ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಚಲಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಮಧ್ಯಾಹ್ನ ನಗರದ ನಂತೂರು ಸರ್ಕಲ್ ಬಳಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಫುಟ್ಬೋರ್ಡ್ನಲ್ಲಿ ನಿಂತಿದ್ದ ಕಂಡೆಕ್ಟರ್ ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಬಸ್ ಮಾಲಕರ ಜೊತೆ ಮಾತುಕತೆ ನಡೆಸಿ ಕೆಲವೊಂದು ಸೂಚನೆಗಳನ್ನು ನೀಡಿ ಅವುಗಳ ಪಾಲನೆಗೆ ನಿರ್ದೇಶನ ನೀಡಿದ್ದರು.
ಗುರುವಾರ ಬಸ್ ಮಾಲಕರ ಜತೆ ಎರಡನೇ ಹಂತದ ಸಭೆ ನಡೆಸಿದ ಆಯುಕ್ತರು ಬಸ್ಗಳಿಗೆ ಬಾಗಿಲು ಅಳವಡಿಸಲು ಸೂಚಿಸಿದ್ದಾರೆ. ಇದಕ್ಕೆ ಬಸ್ ಮಾಲಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಫುಟ್ಬೋರ್ಡ್ನಲ್ಲಿ ಪ್ರಯಾಣಿಕರು ಅಥವಾ ಸಿಬ್ಬಂದಿ ವರ್ಗವು ನೇತಾಡದಂತೆ ಸೂಚನೆ ನೀಡಲಾಗುವುದು. ಒಂದು ವೇಳೆ ಈ ಸೂಚನೆ ಮೀರಿ ನಡೆದರೆ ಬಸ್ ಸಂಚಾರ ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಈ ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಬಸ್ ಮಾಲಕರ ಸಂಘದ ಮುಖಂಡರು ಭರವಸೆ ನೀಡಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಡೋರ್ ಅಳವಡಿಸಲು ಸಲಹೆ ಮಾಡಿದ್ದೇವಷ್ಟೇ ! ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಅವರಲ್ಲಿ ಈ ಬಗ್ಗೆ ಕೇಳಿದಾಗ, ನಾವು ಬಸ್ ಮಾಲಕರ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿಟಿ ಬಸ್ಸುಗಳಲ್ಲಿ ಡೋರ್ ಅಳವಡಿಸುವಂತೆ ಕೇಳಿಕೊಂಡಿದ್ದೇವೆ. ಹಾಗಂತ, ಈ ಬಗ್ಗೆ ಕಡ್ಡಾಯ ಸೂಚನೆ ನೀಡುವಂತೆ ಇಲ್ಲ. ಮೋಟಾರು ವಾಹನ ಕಾಯ್ದೆಯಲ್ಲೇ ಆ ರೀತಿ ಇಲ್ಲ. ಮುನ್ಸಿಪಾಲಿಟಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಡೋರ್ ಕಡ್ಡಾಯದಿಂದ ವಿನಾಯ್ತಿ ಇದೆ. ಆದರೆ ಕಾರ್ಕಳ, ಮೂಡುಬಿದ್ರೆ, ಉಡುಪಿಗೆ ತೆರಳುವ ದೂರದ ಪ್ರಯಾಣದ ಬಸ್ಸುಗಳಲ್ಲಿ ಡೋರ್ ಅಳವಡಿಸುವಂತೆ ಬಸ್ ಮಾಲಕರಿಗೆ ಕಡ್ಡಾಯ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post