ಕುಂದಾಪುರ: ಕೋಟತಟ್ಟು ಕೊರಗ ಕಾಲನಿ ಮೆಹದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಲ್ಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಕಾಲನಿಯಲ್ಲಿ ಕೊರಗ ಸಮುದಾಯದವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು, ಪೊಲೀಸರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ದಲಿತರು, ಕೆಳಸ್ತರದ ವ್ಯಕ್ತಿಗಳಿಗೆ ನೋವಾಗಬಾರದೆಂಬ ಬದ್ಧತೆ ಸರ್ಕಾರಕ್ಕೆ ಇದೆ. ಪೊಲೀಸರು ನೊಂದವರ ಮೇಲೆ ಹಾಕಿದ ಕೇಸು ಸುಳ್ಳು ಎಂಬುದು ಅರಿವಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ತಳಮಟ್ಟದ ಸಮುದಾಯದ ಯಾರೂ ಹೆದರುವ ಅಗತ್ಯವಿಲ್ಲ. ನಾವಿದ್ದೇವೆ, ಸರ್ಕಾರವಿದೆ. ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಬ್ಬರ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು, ಮುಂದಿನ ಕ್ರಮದ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಘಟನೆ ನಡೆದ 2-3 ದಿನಗಳ ನಂತರ ಪೊಲೀಸ್ ಸಿಬ್ಬಂದಿ ಕೊರಗರು ಸಹಿತ ಇನ್ನೂ ಕೆಲವರ ಮೇಲೆ ಕೇಸು ದಾಖಲಿಸಿರುವುದು, ಇದೊಂದು ಸುಳ್ಳು ಪ್ರಕರಣ ಎಂದು ಎಲ್ಲರಿಗೂ ತಿಳಿಯುತ್ತದೆ. ಪೊಲೀಸರು ರೌಡಿ ಕೆಲಸ ಮಾಡಬಾರದು. ಇಲಾಖೆಗೆ ಕಪ್ಪು ಚುಕ್ಕೆ ತರುವ ಕೆಲಸ ಕೆಲವು ಪೊಲೀಸರಿಂದ ಆಗಿದ್ದಕ್ಕೆ ನೋವಾಗಿದೆ. ರಾಜ್ಯದಲ್ಲಿ 1 ಲಕ್ಷ ಪೊಲೀಸರಿದ್ದು ಅವರಲ್ಲಿರುವ ಒಳ್ಳೆ ಪೊಲೀಸರಿಗೆ ಅವಮಾನವಾಗುವ ಕೆಲಸ ಮಾಡುವ ಕೆಲವು ಪೊಲೀಸರಿಂದ ಹೀಗಾಗುತ್ತಿದೆ. ಅವರು ಪೊಲೀಸ್ ಇಲಾಖೆಗೆ ಯೋಗ್ಯರೋ ಇಲ್ಲವೋ ಎಂಬುದನ್ನುಸರ್ಕಾರ ನಿರ್ಧರಿಸುತ್ತದೆ ಎಂದು ಹೇಳಿದರು.
ತಲಾ 2 ಲಕ್ಷ ರೂ. ಪರಿಹಾರ:ಸಂತ್ರಸ್ತ 6 ಮಂದಿಗೆ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವರು, ಮೊದಲ ಹಂತದಲ್ಲಿ ತಲಾ 50 ಸಾವಿರ ರೂ. ಪರಿಹಾರ ಮೊತ್ತದ ಚೆಕ್ ಅನ್ನು ಸ್ಥಳದಲ್ಲಿಯೇ ವಿತರಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಾಗರಿಕ ಆಹಾರ ಪೂರೈಕೆ ನಿಗಮ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್ಪಿ ವಿಷ್ಣುವರ್ಧನ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post