ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿ ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ನೀಡುವ ವೇಳೆ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂದು ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಹೈಕೋರ್ಟ್ ಸಡಿಲಿಸಿ ಆದೇಶಿಸಿದೆ.
ಈ ಆದೇಶದಿಂದಾಗಿ ದರ್ಶನ್ ಇನ್ನು ಮುಂದೆ ದೇಶವ್ಯಾಪಿ ಎಲ್ಲಿ ಬೇಕಾದರೂ ಓಡಾಡಬಹುದು, ಆದರೆ ವಿದೇಶಕ್ಕೆ ತೆರಳಲು ನ್ಯಾಯಾಲಯದ ಅನುಮತಿ ಅಗತ್ಯವಿರಲಿದೆ. ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿರುವ ಷರತ್ತು ಸಡಿಲಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಕಲಬುರಗಿ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಹೆಸರಾಂತ ನಟರಾಗಿದ್ದು, ಅವರು ಶೂಟಿಂಗ್ಗಾಗಿ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಇತರೆಡೆ ಸಂಚರಿಸಬೇಕಾಗುತ್ತದೆ. ಆದರೆ ನ್ಯಾಯಾಲಯ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂದು ಷರತ್ತು ವಿಧಿಸಿರುವುದರಿಂದ ತೊಂದರೆ ಆಗುತ್ತಿದೆ. ಹಾಗಾಗಿ ನ್ಯಾಯಾಲಯ ಆ ಷರತ್ತನ್ನು ಸ್ವಲ್ಪ ಸಡಿಲಿಕೆ ಮಾಡಬೇಕು ಎಂದು ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಮನವಿ ಮಾಡಿದರು.
ಆದರೆ ಅದಕ್ಕೆ ಆಕ್ಷೇಪ ಎತ್ತಿದ ಎಸ್‌ಪಿಪಿ ಪಿ.ಪ್ರಸನ್ನಕುಮಾರ್, ಜಾಮೀನು ಪಡೆಯುವಾಗ ಅರ್ಜಿದಾರರು ಅನಾರೋಗ್ಯದ ಕಾರಣ ನೀಡಿದ್ದರು. ಆದರೆ, ಇದೀಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ. ನ್ಯಾಯಾಲಯ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ವಾದ – ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತು ಸಡಿಲಿಸಿ, ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿತು.
Discover more from Coastal Times Kannada
Subscribe to get the latest posts sent to your email.
Discussion about this post