ಮಂಗಳೂರು, ಎ.1: ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಹಿಂದು ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ನಾರಾಯಣ ಗುರು ವಿಚಾರ ವೇದಿಕೆಯಿಂದ ಸುದ್ದಿಗೋಷ್ಟಿ ಕರೆದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟೀಂ ಸತ್ಯಜಿತ್ ಸುರತ್ಕಲ್‌ನಲ್ಲಿ ವಿವಿಧ ಸಮಾಜದ ಬಾಂಧವರು ಇರುವುದರಿಂದ ಅದು ಹಾಗೇ ಮುಂದುವರಿಯಲಿದ್ದು, ಚುನಾವಣೆಯ ನನ್ನ ಕಾರ್ಯಕ್ಕೂ ಆ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನನ್ನ ಯಾವುದೇ ಕಾರ್ಯಕ್ಕೂ ಬೆಂಬಲ ನೀಡವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಆ ತಂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದರು.
ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದ್ರೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಿದರು. ಆನಂತರ ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬೇಡಿಕೆ ಇಟ್ಟಿದ್ದರು. ಘೋಷಣೆಯಾಗಿ ಎರಡು ಮೂರು ವಾರ ಕಳೆದಿದೆ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯವಕಾಶ ಕೇಳಿದರು. ಆದರೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯಲಿದೆ. ಅದರ ನಡುವೆ ನಮ್ಮ ವಿಚಾರ ವೇದಿಕೆಯ ಬೆಂಬಲ ಬಿಲ್ಲವ ಅಭ್ಯರ್ಥಿಗಳಿಗೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ನಾನು ಒಂದು ವೇಳೆ, ಬ್ರಾಹ್ಮಣ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಅವಕಾಶ ಸಿಕ್ತಿತ್ತು. ನಿಯತ್ತಿನ ರಾಜಕೀಯಕ್ಕೆ ಈಗಿನ ಕಾಲದಲ್ಲಿ ಬೆಲೆ ಇಲ್ಲ. ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಹುಟ್ಟಿದ್ದು, ಬಿಲ್ಲವ ಸಮಾಜದಲ್ಲಿ. ಕೋಟಿ -ಚೆನ್ನಯ್ಯರ ಸ್ವಾಭಿಮಾನ ನನ್ನಲ್ಲಿಯೂ ಬೆಳೆದು ಬಂದಿದೆ. ನಮ್ಮ ಸಮುದಾಯದ ಏಳ್ಗೆಗಾಗಿ ಧ್ವನಿ ಎತ್ತಿದ್ದೇನೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಕ್ಷೇತ್ರದಲ್ಲಿ ಮೂರು ಬಿಲ್ಲವರಿಗೆ ಅವಕಾಶ ಸಿಕ್ಕಿದೆ. ಕಾಂಗ್ರೆಸಿನಲ್ಲಿ ಎರಡು, ಬಿಜೆಪಿಯಲ್ಲಿ ಒಂದು ಸೀಟು ಸಿಕ್ಕಿದೆ. ಮೂರು ಜಿಲ್ಲೆಗಳಲ್ಲಿ 12 ಲಕ್ಷದಷ್ಟು ನಮ್ಮ ಸಮುದಾಯದ ಮತದಾರರಿದ್ದಾರೆ. ಅದಕ್ಕಾಗಿ ಸಮುದಾಯಕ್ಕೆ ಅವಕಾಶ ಕೇಳಿದ್ದೆವು. ಪಕ್ಷ ರಾಜಕೀಯ ಬದಿಗಿಟ್ಟು ಸಮುದಾಯದ ಜನರು ಈ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಮುದಾಯಕ್ಕೆ ಶಕ್ತಿ ಬರಲಿದೆ ಎಂದರು.
ಹಿಂದುತ್ವಕ್ಕಾಗಿ ಕಳೆದ 37 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದಾಗ, ಅನ್ಯಾಯ ಆದಾಗ, ಹಿಂದುತ್ವದ ಪಕ್ಷದಲ್ಲಿಯೇ ನನ್ನನ್ನು ತಿರಸ್ಕರಿಸಿ, ನನಗೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಿದರೂ ನನ್ನ ಜತೆಗಿದ್ದು, ನನ್ನ ಕಷ್ಟದಲ್ಲಿ ಜತೆಯಾದವರ ಮಾತಿಗೆ ಮಾತ್ರ ಬೆಲೆ ನೀಡಲಿದ್ದೇನೆ. ನನ್ನನ್ನು ಕಾಂಗ್ರೆಸ್‌ವಾದಿ ಅನ್ನಲಿ, ಜಾತಿವಾದಿ ಎಂದು ಆಪಾದಿಸಲಿ. ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆ, ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭ್ಯರ್ಥಿಗಳ ಜಯಕ್ಕಾಗಿ ದುಡಿಯಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post