ಕೈಕಂಬ: ಕರಾವಳಿ ಭಾಗದಲ್ಲಿ ಬಲು ಅಪೂರ್ವ ಎನಿಸಿರುವ ಕಪ್ಪು ಚಿರತೆಯೊಂದು ಎಡಪದವು ಸಮೀಪದ ಗೊಸ್ಪಾಲ್ ಸನಿಲದಲ್ಲಿ ಶನಿವಾರ ರಾತ್ರಿ ಬಾವಿಗೆ ಬಿದ್ದಿದೆ. ಅರಣ್ಯ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ 3 ತಾಸು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಈ ಪ್ರದೇಶದಲ್ಲಿ ಚಿರತೆಗಳು ಆಗಾಗ ಕಂಡುಬರುತ್ತಿದ್ದು ನಾಯಿಗಳು ಕಾಣೆಯಾಗುತ್ತಿದ್ದವು. ಆದರೆ ಕರಿ ಚಿರತೆ ಕಂಡುಬಂದಿರುವುದು ವಿಶೇಷ. ಸನಿಲ ನಿವಾಸಿ ಶಕುಂತಲಾ ಆಚಾರ್ಯ ಅವರ ಮನೆಯಂಗಳದ ಬಾವಿಯಲ್ಲಿ ರವಿವಾರ ಬೆಳಗ್ಗೆ ಚಿರತೆ ಪತ್ತೆಯಾಗಿತ್ತು. ಮನೆಯವರು ಅದೇ ಬಾವಿಯಿಂದ 2 ಕೊಡ ನೀರು ಸೇದಿ ಕೊಂಡೊಯ್ದಿದ್ದು, 3ನೇ ಬಾರಿ ಸೇದಲು ಹೋದಾಗ ಚಿರತೆ ಇರುವುದು ಗಮನಕ್ಕೆ ಬಂತು. ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ವಲಯ ಅರಣ್ಯಾ ಧಿಕಾರಿ ರಾಜೇಶ್ ಬಳೆಗಾರ್ ನೇತೃತ್ವದಲ್ಲಿ ಸಹಾಯಕ ವಲಯ ಅರಣ್ಯಾ ಧಿಕಾರಿ ಜಗರಾಜ್, ಅರಣ್ಯ ಪಾಲಕರಾದ ದಿನೇಶ್ ಕುಮಾರ್ ಮತ್ತು ಕ್ಯಾತಲಿಂಗ, ಸೂರಜ್ ಅವರ ತಂಡ ಕೂಡಲೇ ಬೋನು ಬಲೆ ಇನ್ನಿತರ ಪರಿಕರಗಳೊಂದಿಗೆ ಆಗಮಿಸಿದರು. 9 ಗಂಟೆಯ ವೇಳೆಗೆ ಸ್ಥಳೀಯರಾದ ಗಣೇಶ್ ನಾಯಕ್ ಎಡಪದವು, ಹರೀಶ್ ಎಡಪದವು ಮತ್ತು ಮೌರಿಸ್ ಪಿಂಟೋ ಸಹಿತ ಹಲವರ ಸಹಾಯದೊಂದಿಗೆ ಚಿರತೆಯನ್ನು ಹಿಡಿಯುವ ಕಾರ್ಯ ಆರಂಭಿಸಲಾಗಿತ್ತು.
ತಗ್ಗು ಪ್ರದೇಶದಲ್ಲಿರುವ ಬಾವಿಯ ಸುತ್ತ ಇಕ್ಕಟ್ಟಾಗಿತ್ತು. ಇನ್ನೊಂದೆಡೆ 1 ಸಾವಿರದಷ್ಟು ಜನರು ಜಮಾಯಿಸಿದ್ದರು. ವೀಡಿಯೋ, ಫೋಟೋ ತೆಗೆಯಲೆಂದು ಮುಂದೆ ಬರುವ ಕುತೂಹಲಿಗಳ ನಡುವೆ ಕಾರ್ಯಾಚರಣೆ ತ್ರಾಸದಾಯಕವಾಗಿತ್ತು. ಬಳಿಕ ಬಜಪೆ ಪೊಲೀಸರು ಜನರನ್ನು ನಿಯಂತ್ರಿಸಿದರು. 11.30ಕ್ಕೆ ಚಿರತೆಯನ್ನು ಸುರಕ್ಷಿತವಾಗಿ ಬೋನಿನೊಳಗೆ ಸೇರಿಸಲಾಯಿತು.
ಚಿರತೆಗೆ ಆಹಾರವಾದ ಹಸು! : ಶನಿವಾರ ರಾತ್ರಿ 10.30ರ ಸುಮಾರಿಗೆಕಪ್ಪು ಚಿರತೆ ಬಾವಿಗೆ ಬಿದ್ದಿರುವ ಸ್ಥಳಕ್ಕಿಂತ ಸುಮಾರು 2 ಕಿ.ಮೀ. ದೂರದ ಮಡಪಾಡಿಯ ನಾರ್ಬರ್ಟ್ ಮಥಾಯಸ್ ಅವರ 6 ತಿಂಗಳ ದನದ ಕರುವನ್ನು ಚಿರತೆಯೊಂದು ತೋಟಕ್ಕೆ ಎಳೆದೊಯ್ದು ಕುತ್ತಿಗೆ, ಎದೆಯ ಭಾಗವನ್ನು ತಿಂದು ಹಾಕಿತ್ತು. ಇದು ಮನೆಯವರ ಗಮನಕ್ಕೆ ಬಂದರೂ ರಾತ್ರಿಯಾಗಿರುವ ಕಾರಣ ಕರುವಿನ ಶವವನ್ನು ಅಲ್ಲೇ ಬಿಟ್ಟಿದ್ದರು. ಮಧ್ಯರಾತ್ರಿ ಮತ್ತೆ ಬಂದ ಚಿರತೆ ಹಸುವಿನ ಎದೆ ಹಾಗೂ ಕುತ್ತಿಗೆಯ ಭಾಗವನ್ನು ತಿಂದಿದೆ. ಅದು ಕಪ್ಪು ಚಿರತೆಯದೇ ಕೆಲಸವೋ ಬೇರೆ ಚಿರತೆಯದೋ ಎಂಬುದು ದೃಢಪಟ್ಟಿಲ್ಲ. ಒಟ್ಟಿನಲ್ಲಿ ಕಪ್ಪು ಚಿರತೆಯ ಸೆರೆಯಿಂದಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಒಂದೆರಡು ಚಿರತೆ ಪರಿಸರದಲ್ಲಿ ಇರುವ ಅನುಮಾನ ವ್ಯಕ್ತವಾಗಿರು ವುದರಿಂದ ಬೋನು ಇಡುವ ಬಗ್ಗೆ ಅರಣ್ಯ ಇಲಾಖೆ ಚಿಂತಿಸಿದೆ. ಸೆರೆಯಾದ ಕಪ್ಪು ಚಿರತೆಗೆ ಸುಮಾರು 5 ವರ್ಷ ಅಂದಾಜಿಸಲಾಗಿದೆ. ಪಿಲಿಕುಳ ನಿಸರ್ಗಧಾಮದಲ್ಲಿಯೂ ಕಪ್ಪುಚಿರತೆ ಇಲ್ಲದ ಕಾರಣ ಇದನ್ನು ಅಲ್ಲಿಗೆ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸ್ಥಳೀಯರ ಸಹಕಾರ ದಲ್ಲಿ ಕಪ್ಪು ಚಿರತೆಯನ್ನು ರಕ್ಷಿಸ ಲಾಗಿದೆ. ಈ ಪ್ರದೇಶ ದಲ್ಲಿ ಬಲು ಅಪರೂಪ ದ್ದಾಗಿರುವ ಕಪ್ಪುಚಿರತೆ ಪಶುವೈದ್ಯರಿಂದ ತಪಾಸಣೆ ನಡೆಸಿ ಬಳಿಕ ಅವರ ಸಲಹೆ ಯಂತೆ ಮುಂದಿನ ಕ್ರಮ ಕೈಗೊಳ್ಳ ಲಾಗುವುದು.
Discussion about this post