ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಮುಚ್ಚಿ ಹೋಗಿದ್ದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹೊರ ತೆಗೆಯಲು ಮಕ್ಕಳ ಸಹಾಯವಾಣಿ ಸಜ್ಜಾಗಿದ್ದು, ಭೌತಿಕ ತರಗತಿಗಳ ಆರಂಭದ ಬಳಿಕ ಜಾಗೃತಿ ಹಾಗೂ ಕೌನ್ಸೆಲಿಂಗ್ ಆರಂಭಗೊಳ್ಳಲಿವೆ.
ಮಕ್ಕಳ ಹಕ್ಕುಗಳ ರಕ್ಷಣೆಯ ಕಾರ್ಯಕರ್ತರ ಪ್ರಕಾರ ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು ವರದಿಯಾಗಿಲ್ಲ. ಈ ಪೈಕಿ ಕೌಟುಂಬಿಕ ದೌರ್ಜನ್ಯಗಳೇ ಹೆಚ್ಚಾಗಿವೆ. ಶಾಲೆಗಳು ಆರಂಭವಾಗದ ಕಾರಣ ಹಿಂಸೆಗಳನ್ನು ಅನುಭವಿಸಿದ ಮಕ್ಕಳೂ ಮೌನವಾಗಿದ್ದಾರೆ.
ಮಕ್ಕಳ ಸಹಾಯವಾಣಿ ಪ್ರಕಾರ, ಪ್ರತಿ ವರ್ಷ ಮಕ್ಕಳ ಮೇಲಿನ ದೌರ್ಜನ್ಯ ಕುರಿತ ದೂರುಗಳ ಸಂಖ್ಯೆ ಹೆಚ್ಚುತ್ತಾ ಹೋಗಿವೆ. ಆದರೆ, 2020–21ರಲ್ಲಿ ಆರೋಪಗಳು ಕೇಳಿಬಂದಿದ್ದರೂ, ಜಾಗೃತಿ ಹಾಗೂ ಅಭಿವ್ಯಕ್ತಿಸಲು ವೇದಿಕೆ ಸಿಗದ ಕಾರಣ ದೂರುಗಳ ಸಂಖ್ಯೆ ಕಡಿಮೆಯಾಗಿವೆ.
‘ಕಳೆದ ವರ್ಷದ ಲಾಕ್‌ಡೌನ್ ಬಳಿಕ (2021ರ ಜನವರಿ) ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಆಗ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಶಾಲೆಗಳು ನಡೆಯದ ಕಾರಣ ಎಲ್ಲ ಮಕ್ಕಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಕರಣಗಳ ಸಂಖ್ಯೆ ಕಡಿಮೆ’ ಎಂದು ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದರು.
‘ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹೆಚ್ಚಿನ ಅಸ್ಥೆ ವಹಿಸಲು ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ. ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ಪ್ರತಿ ಶನಿವಾರ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಲಾಗುವುದು. ಆನ್‌ಲೈನ್ ತರಗತಿಗಳಲ್ಲೂ ಮಕ್ಕಳ ಸಹಾಯವಾಣಿ (1098) ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ’ ಎಂದರು.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ತನಕ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಒಟ್ಟು 2,214 ಶಾಲೆಗಳಲ್ಲಿ ಸುಮಾರು 3,18,436 ಮಕ್ಕಳು ಇದ್ದಾರೆ.
‘ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳು ನಡೆಯದ ಕಾರಣ ಮಕ್ಕಳಿಗೆ ಹೇಳಿಕೊಳ್ಳಲೂ ತಿಳಿಯದಾಗಿದೆ. ಇದರಿಂದಾಗಿ ಸಾಕಷ್ಟು ಪ್ರಕರಣಗಳು ಹೊರಬಂದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಪೀಟರ್ ಡಿಸೋಜ ತಿಳಿಸಿದರು.
ಕುಟುಂಬದೊಳಗಿನ ದೌರ್ಜನ್ಯವೇ ಹೆಚ್ಚು: ‘ತಂದೆ ಅಥವಾ ತಾಯಿಯಿಂದ ಹಲ್ಲೆ, ಸಂಬಂಧಿಗಳಿಂದ ದೌರ್ಜನ್ಯದ ಆರೋಪಗಳು ಹೆಚ್ಚಿವೆ. ಕೆಲಸವಿಲ್ಲದೇ ಸಮಸ್ಯೆಗೆ ಸಿಲುಕಿದ ಪೋಷಕರು ಮಕ್ಕಳ ಮೇಲೆ ದರ್ಪ ತೋರುತ್ತಿರುವ ಬಗ್ಗೆ ದೂರುಗಳಿವೆ. ಈ ರೀತಿಯಾಗಿ ಕುಟುಂಬದೊಳಗೆ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ’ ಎನ್ನುತ್ತಾರೆ ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012ರಿಂದ 2020ರ ತನಕ ಪೊಲೀಸ್ ಠಾಣೆಯಲ್ಲಿ 731 ಫೋಕ್ಸೊ ಪ್ರಕರಣಗಳು ದಾಖಲಾಗಿದ್ದವು. ಆದರೆ, 2021ರ ಜನವರಿ ಮತ್ತು ಫೆಬ್ರುವರಿಯಲ್ಲಿ 66 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ತಿಂಗಳಿಗೆ ಸರಾಸರಿ 8ರಷ್ಟು ಇದ್ದ ಪ್ರಕರಣಗಳ ಸಂಖ್ಯೆಯು ಲಾಕ್‌ಡೌನ್ ಬಳಿಕ 33ಕ್ಕೆ ಆಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post