ಮಂಗಳೂರು, ನ.1: ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಮತ್ತು ಆಸ್ತಿಗಳ ಹಾಗೂ ಪಾವತಿಗಳ ವಿವರ ತಿಳಿಯಲು ವೆಬ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸೋಮವಾರ ಚಾಲನೆ ನೀಡಿದರು.
ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪಾಲಿಕೆ ವ್ಯಾಪ್ತಿಯಲ್ಲಿ 2008ರ ಎ.1ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಈವರೆಗೆ ತೆರಿಗೆದಾರರು ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬೇಕಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದ್ದು, ಆನ್‌ಲೈನ್ ಮುಖೇನ ಬಳಸಿಕೊಳ್ಳಲು ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದರು.
ಇದರಿಂದ ಸಾರ್ವಜನಿಕ ಮತ್ತು ಕಚೇರಿಯ ಬಹುತೇಕ ಸಮಯದ ಉಳಿತಾಯವಾಗಲಿದ್ದು, ಇದು ಜನಸ್ನೇಹಿ ತಂತ್ರಾಂಶವಾಗ ಲಿದೆ. ನ. 2ರಿಂದ ಆನ್‌ಲೈನ್ ವ್ಯವಸ್ಥೆ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.
ಆನ್‌ಲೈನ್ ಪಾವತಿ ಅತಿ ಸರಳ ಆನ್‌ಲೈನ್ ಆಸ್ತಿ ತೆರಿಗೆ ಮಾಡುವಾಗ www.mccpropertytax.in ಲಿಂಕ್‌ಗೆ ಕ್ಲಿಕ್ ಮಾಡಬೇಕು. ಆಗ ತೆರೆಯುವ ಪುಟದಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ದಾಖಲಿಸಿ, ಬಳಿಕ ನಿಮ್ಮ ಆಸ್ತಿಯು ಭೂಪರಿವರ್ತನೆ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಭೂ ಪರಿವರ್ತನೆ ಆದಲ್ಲಿ ರಸ್ತೆ ವಿಸ್ತೀರ್ಣಕ್ಕೆ ಮಾಡಿರುವ ದಾನ ಪತ್ರದ ಬಗ್ಗೆ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಬೇಕು. ಕಟ್ಟಡ ಸಂಖ್ಯೆ, ಖಾತಾ ಸಂಖ್ಯೆ, ಪ್ರಾಪರ್ಟಿ ಐಡಿ (ಪಿಐಡಿ), ಆಸ್ತಿದಾರರ ವಿಳಾಸ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ, ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ನಿಮ್ಮ ಆಸ್ತಿಯಲ್ಲಿ ಬಾಡಿಗೆದಾರರು ಇದ್ದರೆ ಅವರ ಹೆಸರು ಮತ್ತು ಇತರೇ ವಿವರಗಳನ್ನು ದಾಖಲು ಮಾಡಬೇಕು. ನಿಮ್ಮ ಆಸ್ತಿ ಬರುವ ರಸ್ತೆಯನ್ನು ಸರಿಯಾಗಿ ಆಯ್ಕೆ ಮಾಡಿ, ಮತ್ತು ಕೇಳಿರುವ ಮಾಹಿತಿಗಳಿಗೆ ಅನುಗುಣವಾಗಿ ವಿವರಗಳನ್ನು ದಾಖಲಿಸಿ, ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಪರಿಶೀಲಿಸಬೇಕು. ನೆಟ್‌ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಗೂಗಲ್ ಪೇ, ಫೋನ್ ಪೇ, ಬ್ಯಾಂಕ್ ಮೂಲಕ ನಿಮ್ಮ ಪಾವತಿಯನ್ನು ಪೂರ್ಣಗೋಳಿಸಬಹುದು. ಆಪ್‌ಲೈನ್‌ನಲ್ಲಿ ಪಾವತಿ ಮಾಡಬಹುದಾದರೆ ಚಲನ್ ಪಡೆದುಕೊಂಡು ನಿಮಗೆ ಅನುಕೂಲವಾಗುವ ಯಾವುದೇ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು.
ಸುದ್ದಿಗೋಷ್ಠಿಯಲ್ಲಿ: ಡಿ. ವೇದವ್ಯಾಸ ಕಾಮತ್, ಶಾಸಕರು, ಉಪಮೇಯರ್ ಸುಮಂಗಳಾ ರಾವ್, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಶೋಭಾ ರಾಜೇಶ್, ಲೀಲಾವತಿ ಪ್ರಕಾಶ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.