ಉಳ್ಳಾಲ, ನ.1: ಪೊಲೀಸರಿಗೆ ನಿರಂತರ ಚಳ್ಳೆಹಣ್ಣು ತಿನ್ನಿಸಿ ಗಾಂಜಾ ಮಾರಾಟ ನಡೆಸುತ್ತಿದ್ದ ಬಂಟಿ-ಬಬ್ಲಿ ದಂಪತಿಯನ್ನ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ “ಆ್ಯಂಟಿ ಡ್ರಗ್ ಟೀಮ್” ತಲಪಾಡಿ ಸಮೀಪದ ಕಿನ್ಯ ಎಂಬಲ್ಲಿ ಬಂಧಿಸಿದೆ.
ಕಿನ್ಯಾ ಗ್ರಾಮದ ರೆಹಮತ್ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಶೇಖ್ ನಝೀರ್ ಹುಸೈನ್ (50) ಮತ್ತು ಆತನ ಪತ್ನಿ ಅಪ್ಸಾತ್ (37) ಬಂಧಿತ ದಂಪತಿ. ಕಿನ್ಯಾ, ರಹಮತ್ ನಗರದ ಬಾಡಿಗೆ ಮನೆಯಲ್ಲೇ ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಕ್ಟೋಬರ್ 30 ರಂದು ದಾಳಿ ನಡೆಸಿ ಮನೆಯಲ್ಲಿದ್ದ ಸುಮಾರು 2.4 ಲಕ್ಷ ಬೆಲೆಬಾಳುವ 8 ಕೆಜಿಯಷ್ಟು ಗಾಂಜಾ ಹಾಗೂ ಮಾರಾಟ ಮಾಡಲು ಉಪಯೋಗಿಸಿದ್ದ ರೆನಾಲ್ಟ್ ಕ್ವಿಡ್ ಬಿಳಿ ಬಣ್ಣದ ಕಾರು, 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 5.14.810/ ಆಗಿದ್ದು, ಆರೋಪಿ ದಂಪತಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 195/2024 ಕಲಂ 8(c), 20 (b) (ii) (B) NDPS Act 1985 r/w 3(5) BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಧಿತ ಆರೋಪಿ ನಝೀರ್ ಹುಸೈನ್ ಮೂಲತಃ ಮಂಜೇಶ್ವರದ ಕುಂಜತ್ತೂರು ನಿವಾಸಿಯಾಗಿದ್ದು, ಗಾಂಜಾ ಮಾರಾಟಕ್ಕಾಗಿಯೇ ಕಿನ್ಯಾ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದಿದ್ದ. ನಝೀರ್ ತನ್ನ ಕಾರಲ್ಲೇ ಪತ್ನಿ ಅಥವಾ ಮಕ್ಕಳನ್ನ ಕುಳ್ಳಿರಿಸಿ ಗಿರಾಕಿಗಳಿಗೆ ಗಾಂಜಾ ಪೂರೈಸುತ್ತಿದ್ದನಂತೆ. ಗಾಂಜಾ ಮಾರಾಟ ವೇಳೆ ಕಾರಲ್ಲಿ ಪತ್ನಿ ಅಥವಾ ಮಕ್ಕಳನ್ನ ಕುಳ್ಳಿರಿಸಿ ಪೊಲೀಸರಿಗೆ ಸ್ವಲ್ಪವೂ ಸಂಶಯ ಬಾರದಂತೆ ಗಾಂಜಾ ಧಂದೆ ನಡೆಸುತ್ತಿದ್ದನೆಂದು ಆರೋಪಗಳಿವೆ. ಖಚಿತ ಮಾಹಿತಿಯನ್ನ ಆಧರಿಸಿ ಪೊಲೀಸರು ಆರೋಪಿಗಳ ಬಾಡಿಗೆ ಮನೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ಎನ್.ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆ ನಿರೀಕ್ಷಕರಾದ ಬಾಲಕೃಷ್ಣ ಹೆಚ್.ಎನ್, ಪಿಎಸ್ ಐ ಸಂತೋಷ್ ಕುಮಾರ್ ಡಿ, “ಆಂಟಿ ಡ್ರಗ್ ಟೀಮ್ “ನ ಪಿಎಸ್‌ಐ ಪುನೀತ್ ಹಾಗೂ ಸಿಬ್ಬಂದಿಯವರಾದ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್, ತಿರುಮಲೇಶ್ ಭಾಗವಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post