ಮಂಗಳೂರು, ಮೇ 23: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೇತೃತ್ವದಲ್ಲಿ ನಿರ್ಮಾಣವಾದ ಸಭಾಂಗಣ ಸಮುದಾಯದ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ, ಸೌಹಾರ್ದ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ. ಎಸ್.ಅಬ್ದುಲ್ ನಝೀರ್ ಶುಭ ಹಾರೈಸಿದ್ದಾರೆ.




ಅವರು ಶನಿವಾರ ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿರುವ ವಿನೂತನ ನಾಲ್ಕು ಅತ್ಯಾಧುನಿಕ ಸಭಾಭವನಗಳನ್ನು ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನ ಲ್ಲಿ ಏಕಕಾಲಕ್ಕೆ ಉದ್ಘಾಟಿಸಿ ಮಾತನಾಡುತ್ತಿದ್ದ ನ್ಯಾ. ಎಸ್.ಅಬ್ದುಲ್ ನಝೀರ್, ಶಿಕ್ಷಣ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಪೂರಕ. ಶಿಕ್ಷಣ ಬಡತನ ನಿರ್ಮೂಲನೆ ಮಾಡಲು ಪ್ರಮುಖ ಸಾಧನ. ಕೃಷ್ಣ ಪಾಲೆಮಾರ್ ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದವರು. ಹಲವಾರು ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಶಿಕ್ಷಣ, ಉದ್ಯೋಗ ನೀಡಿದ್ದಾರೆ. ವಿಕಾಸ್ ಎಜುಕೇಶನ್ ಟ್ರಸ್ಟ್ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವುದು ಮಹತ್ವದ ಕಾರ್ಯ ಎಂದು ಶ್ಲಾಘಿಸಿದರು. ಮಂಗಳೂರು ಜನತೆಯ ಮದುವೆ, ಮಂಗಳ ಕಾರ್ಯಕ್ರಮಗಳು ಹಾಗೂ ಉತ್ತಮ ಕಾರ್ಯಗಳಿಗೆ ಪಾಲೆಮಾರ್ ಸಮೂಹದ ಸಭಾಂಗಣಗಳು ಬಳಕೆಯಾಗಲಿ ಎಂದು ಶುಭ ಹಾರೈಸಿದರು.




ಸಮಾರಂಭದಲ್ಲಿ ಸಾನಿಧ್ಯ ಸಂಸ್ಥೆ, ಸೇವಾಶ್ರಮದ ಗೀತಾ ಶೆಟ್ಟಿ, ಸಮಾಜ ಸೇವಕಿ ತಬುಸ್ಸಮ್, ವಿಶೇಷ ಚೇತನ ಕಲಾವಿದ ಕೌಶಿಕ್ ಆಚಾರ್ಯ, ಪ್ರತಿಭಾವಂತರಾದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದೀಶಾ ಪೂಜಾರಿಯವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್. ಅಬ್ದುಲ್ ನಜೀರ್ ಅವರು ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಗಳಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಸ್ಪೀಕರ್ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ್ ಕಾಮತ್, ಉಮಾನಾಥ್ ಕೋಟ್ಯಾನ್ ಮತ್ತು ಎಂಎಲ್ಸಿ ಇವಾನ್ ಡಿ’ಸೋಜಾ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post