2019 ಆಗಸ್ಟ್ 6ರಂದು ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ತಡೆಗೋಡೆ ಕುಸಿದಿತ್ತು. ಕೆಂಪು ಕಲ್ಲಿನಿಂದ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಮಹಾ ದುರಂತ ಸಂಭವಿಸಿತ್ತು. ನೋಡು ನೋಡುತ್ತಿದ್ದಂತೆ ತ್ಯಾಜ್ಯ ಸುನಾಮಿ 2 ಕಿಮೀ. ದೂರದ ಮಂದಾರವನ್ನು ನುಂಗಿ ಹಾಕಿತು. ಸುಮಾರು 10 ಲಕ್ಷ ಟನ್ ತ್ಯಾಜ್ಯ ಮಂದಾರದ ಸುಮಾರು 17 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಆಹುತಿ ಪಡೆಯಿತು. ಸುಮಾರು 25 ಕುಟುಂಬಗಳು ಅಕ್ಷರಶಃ ಬೀದಿ ಪಾಲಾದವು. ಸಾಕು ಪ್ರಾಣಿಗಳು ತಬ್ಬಲಿಯಾದವು. ಕೆರೆ, ಕೊಳ, ಬಾವಿ ಕಲುಷಿತಗೊಂಡಿತು. ನಳನಳಿಸುತ್ತಿದ್ದ ಭೂಮಿ ಸ್ಮಶಾನವಾಯಿತು.
ಇದೆಲ್ಲ ಮಂಗಳೂರು ಮಹಾನಗರಪಾಲಿಕೆಯ ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ತ್ಯಾಜ್ಯ ಸುನಾಮಿಯ ಹೊಡೆತಕ್ಕೆ ಸಿಲುಕಿದ ಮಂದಾರದ ಸಂತ್ರಸ್ತರ ಒಂದು ಕಿರುನೋಟ.
ಆ ದೃಶ್ಯಗಳನ್ನು ಕಂಡಾಗ ಎಂತಹ ಕಲ್ಲು ಹೃದಯ ಕೂಡ ಕರಗಿ ನೀರಾಗಬಹುದು. ಇತ್ತ ಮಂಗಳೂರಿನ ಕುಲಾಸೊ ಆಸ್ಪತ್ರೆಯಲ್ಲಿ ವೃದ್ಧ ಮಾತೆಯೊಬ್ಬರು ಕೋಮಾ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ, ಅತ್ತ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೃದ್ದರೊಬ್ಬರು ಅರೆ ಪ್ರಜ್ಞಾವಸ್ಥೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರು ಇದೀಗ ತಾನೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಮನೆ ಸೇರಿದ್ದಾರೆ. ಎಲ್ಲೆಡೆ ಅಸೌಖ್ಯ, ಅಶಾಂತಿ, ದುಃಖ, ಮೌನ ಮಡುಗಟ್ಟಿ ನಿಂತಿದೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ಟನ್ ಗಟ್ಟಲೆ ತ್ಯಾಜ್ಯ ಹಸಿರಿನಿಂದ ನಳನಳಿಸುತ್ತಿದ್ದ ಮಂದಾರ ಭೂಪ್ರದೇಶವನ್ನು ಅಪೋಶಣ ಮಾಡಿ ಇದೀಗ ಬರೋಬ್ಬರಿ ಎರಡೂವರೆ ವರ್ಷ ಕಳೆದಿದೆ. ರಾಜ್ಯ ಸರಕಾರ, ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ ಅಕ್ಷರಶಃ ಇದನ್ನು ಮರೆತೇ ಬಿಟ್ಟಿದೆ. ಅಲ್ಲಿನ ಸಂತ್ರಸ್ತರು ಯಾವ ರೀತಿ ಬದುಕು ಕಟ್ಟಿಕೊಂಡಿದ್ದಾರೆ ಎಂಬ ಭಯಾನಕ ವಿಷಯ ಬೆಳಕಿಗೆ ಬಂದಿದೆ.
ತ್ಯಾಜ್ಯ ಸಂತ್ರಸ್ತರು ಮಂದಾರ ಎಂಬ ಹಚ್ಚ ಹಸಿರಿನ ನೆಲದಿಂದ ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಸೇರಿದ ಕುಲಶೇಖರ ಬಳಿಯ ಫ್ಲ್ಯಾಟ್ ಎಂಬ ಪಂಜರ ಸೇರಿ ಎರಡೂವರೆ ವರ್ಷವಾಗಿದೆ. ಮಧ್ಯಂತರ ಪರಿಹಾರ ಬಿಟ್ಟರೆ ಅವರಿಗೇನೂ ಸಿಕ್ಕಿಲ್ಲ. ಫ್ಲ್ಯಾಟನ್ನು ಸಂತ್ರಸ್ತರ ಹೆಸರಿಗೆ ಮಾಡುವ ಪ್ರಕ್ರಿಯೆ ಕೂಡ 30 ತಿಂಗಳು ಕಳೆದರೂ ನಡೆದಿಲ್ಲ. ಹೆಚ್ಚಿನ ಸಂತ್ರಸ್ತರಿಗೆ ದುಡಿಯಲು ಕೆಲಸವಿಲ್ಲದ ಜತೆಗೆ ಆರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಸರಕಾರದಿಂದ ದೊರೆತ ಮಧ್ಯಂತರ ಪರಿಹಾರದ ಹಣವೆಲ್ಲ ಆಸ್ಪತ್ರೆ ಪಾಲಾಗಿದೆ. ಮುಂದೆ ಬದುಕುವ ದಾರಿ ಯಾವುದು ಎಂಬ ಚಿಂತೆ ದೈತ್ಯಾಕಾರದಲ್ಲಿ ಅವರನ್ನು ಕಾಡಲಾರಂಭಿಸಿದೆ.
ಸಂತ್ರಸ್ತ ಕುಟುಂಬದ ಹಿರಿಯ ಸದಸ್ಯರೆಲ್ಲ ತಾವು ಹುಟ್ಟಿ ಬೆಳೆದ, ಬದುಕು ಕಟ್ಟಿಕೊಂಡ ನೆಲ-ಜಲ ಕಳೆದುಕೊಂಡ ಕೊರಗಿನಿಂದ ಹಾಸಿಗೆ ಹಿಡಿದಿದ್ದಾರೆ. ಈಗಾಗಲೇ ಇಬ್ಬರು ಹಿರಿಯ ಸಂತ್ರಸ್ತರು ಸಾವನ್ನಪ್ಪಿದ್ದಾರೆ. ಇದೀಗ ಖ್ಯಾತ ಸಾಹಿತಿ ಮಂದಾರ ಕೇಶವ ಭಟ್ ಅವರ ಮನೆತನಕ್ಕೆ ಸೇರಿದ ದಿವಂಗತ ಮಾಧವ ಭಟ್ ಅವರ ಪತ್ನಿ ರಾಧಾ ಭಟ್ ಅವರು ಆಸ್ಪತ್ರೆ ಸೇರಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಗರದ ಕುಲಾಸೊ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂದಾರಕ್ಕೆ ತ್ಯಾಜ್ಯ ಸುನಾಮಿ ಬಡಿಯುವ ವರೆಗೂ ಆರೋಗ್ಯವಂತರಾಗಿ ಲವಲವಿಕೆಯ ಜೀವನ ನಡೆಸುತ್ತಿದ್ದ ಈ ಹಿರಿಯ ಜೀವ ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ನೆಲ -ಜಲಕ್ಕೆ ವಿದಾಯ ಹೇಳಿದ ಬಳಿಕ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಮನೆ, ತೋಟ, ನಾಗಬನ, ದೈವಸ್ಥಾನ ಸೇರಿದಂತೆ ಸರ್ವಸ್ವವನ್ನೂ ಕಳೆದುಕೊಂಡ ಬಳಿಕ ಅವರ ಆರೋಗ್ಯ ಹದಗೆಡಲಾರಂಭಿಸಿತು. ಇದೀಗ ಕಳೆದ 10 ದಿನಗಳಿಂದ ರಾಧಾ ಭಟ್ ಅವರ ಆರೋಗ್ಯ ಸ್ಥಿತಿ ವಿಷಮಿಸಲಾರಂಭಿಸಿದೆ.
ಮಂದಾರದ ಪಾರಂಪರಿಕ ಮನೆ ಅದೆಷ್ಟೋ ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದ ಮನೆ, ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿದ ಮನೆ. ಜತೆಗೆ ರಾಧಾ ಭಟ್ ಅವರು ಸಮಾಜ ಸೇವೆ, ಮಹಿಳಾಪರ ಹೋರಾಟ ನಡೆಸಿದವರು. ಪಂಚಾಯಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಬಡತನ- ಸಿರಿತನ ಎರಡನ್ನೂ ಅನುಭವಿಸಿದ ಮಹಾತಾಯಿ. 2004-05ರಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಅವರ 12.71 ಎಕರೆ ಜಾಗವನ್ನು ಮಂಗಳೂರು ಮಹಾನಗರಪಾಲಿಕೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅಂದು ನಿಗದಿಪಡಿಸಿದ ದರವನ್ನು ಪಾಲಿಕೆ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಪ್ರಕರಣ ರಾಜ್ಯ ಹೈಕೋರ್ಟ್ ನಲ್ಲಿದೆ. ಇದೀಗ ತ್ಯಾಜ್ಯ ಸುನಾಮಿಯಿಂದ ರಾಧಾ ಭಟ್ ಅವರ 1.48 ಎಕರೆ ಜಮೀನು ಸಂಪೂರ್ಣ ಕಸದೊಳಗೆ ಹುದುಗಿ ಹೋಗಿದೆ. ಇದರ ಜತೆಗೆ ರಾಧಾ ಭಟ್ ಕುಟುಂಬಕ್ಕೆ ಸೇರಿದ 15 ಸೆಂಟ್ಸ್ ಕನ್ವರ್ಸನ್ ಭೂಮಿ, ಒಂದು ನಾಗಬನ, ದೈವಸ್ಥಾನ, ಪಾರಂಪರಿಕ ಮನೆ ಹಾಗೂ ಇತರ ಎರಡು ಮನೆ, ಒಂದು ಸಾವಿರಕ್ಕೂ ಹೆಚ್ಚು ಫಲಭರಿತ ಅಡಿಕೆ, ಒಂದು ಸಾವಿರಕ್ಕೂ ಹೆಚ್ಚು ಕರಿಮೆಣಸಿನ ಬಳ್ಳಿ, 2 ಕೆರೆ, ಒಂದು ಬಾವಿ, ಪಂಪ್ ಸೆಟ್, ಅರಣ್ಯ ಉತ್ಪನ್ನ 10 ಲಕ್ಷ ಟನ್ ಕಸದೊಳಗೆ ಹುದುಗಿ ಹೋಗಿದೆ.
ರಾಧಾ ಭಟ್ ಅವರ ಸ್ಥಿತಿ ಈ ರೀತಿಯಾದರೆ, ಇತ್ತ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಮಪ್ಪ ಮೊಯ್ಲಿ ಅವರದ್ದು ಮತ್ತೊಂದು ಕಣ್ಣೀರಿನ ಕಥೆ. ಬ್ರೈನ್ ಸ್ಟ್ರೋಕ್ ಗೆ ಗುರಿಯಾಗಿರುವ ಸೋಮಪ್ಪ ಮೊಯ್ಲಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆಯ ಬೆಡ್ ನಲ್ಲಿದ್ದಾರೆ. ಸ್ಟ್ರೋಕ್ ನಿಂದ ಬಿದ್ದುಬಿಟ್ಟು ತಲೆಗೆ ಏಟಾಗಿ ಬ್ಯಾಂಡೇಜು ಹಾಕಲಾಗಿದೆ. ಮನೆ ಮಠ ಕಳೆದುಕೊಂಡ ದುಃಖದಲ್ಲೇ ಅವರು ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಹೆಂಡತಿ ಮಕ್ಕಳು ಇಲ್ಲದ ಅವರನ್ನು ಸೊಸೆ ಮಮತಾ ನೋಡಿಕೊಳ್ಳುತ್ತಿದ್ದಾರೆ. ಕಳೆದ 20 ದಿನಗಳಿಂದ ಸೋಮಪ್ಪ ಮೊಯ್ಲಿ ಅವರ ಮಾತು ನಿಂತು ಹೋಗಿದೆ. ಅವರ ಅಣ್ಣ ನಾರಾಯಣ ಮೊಯ್ಲಿ ಅವರು ಕೂಡ ಜಾಗ ಕಳೆದುಕೊಂಡ ನೋವಿನಿಂದ ಹಾಸಿಗೆ ಹಿಡಿದು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವವರ ಸ್ಥಿತಿ ಈ ರೀತಿಯಾದರೆ ಕುಲಶೇಖರ ಬಳಿಯ ಗೃಹ ನಿರ್ಮಾಣ ಮಂಡಳಿಯ ಫ್ಲ್ಯಾಟ್ ನಲ್ಲಿ ಜೀವಿಸುತ್ತಿರುವ ಸಂತ್ರಸ್ತ ಬಡಪಾಯಿಗಳ ಕಥೆ ಒಬ್ಬೊಬ್ಬರದು ಒಂದೊಂದು ರೀತಿಯದ್ದು. ಕುಲಶೇಖರ ಫ್ಲ್ಯಾಟ್ ನಲ್ಲಿರುವ ಸಂತ್ರಸ್ತರಾದ ಕೆ. ನಾರಾಯಣ ಮೊಯ್ಲಿ ಅವರು ಇದೀಗ ತಾನೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಫ್ಲ್ಯಾಟ್ ಗೆ ಮರಳಿದ್ದಾರೆ. ಫ್ಲ್ಯಾಟ್ ಬಳಿ ರಸ್ತೆ ದಾಟುತ್ತಿದ್ದಾಗ ಅವರಿಗೆ ಅಪಘಾತವಾಗಿತ್ತು. ದ್ವಿಚಕ್ರ ಸವಾರನೊಬ್ಬ ಡಿಕ್ಕಿ ಹೊಡೆದು ಕಾಲಿನ ಎಲುಬು ತುಂಡಾಗಿತ್ತು. ಇನ್ನು ಮಂದಾರದಲ್ಲಿ ಮನೆ ಕಳೆದುಕೊಂಡ ಜಲಜಾ ಅವರು ಮಕ್ಕಳು ಸೇರಿ 7 ಮಂದಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇಬ್ಬರು ಗಂಡು ಮಕ್ಕಳು ಕೂಲಿ ಕೆಲಸ ಮಾಡಿ 7 ಮಂದಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲೂ ಕೂಡ ಜಲಜಾ ಅವರು ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಹಾಸಿಗೆ ಹಿಡಿದಿದ್ದಾರೆ.
ತ್ಯಾಜ್ಯ ಸುನಾಮಿಯ ಆರಂಭದ ದಿನಗಳಲ್ಲಿ ಇಲ್ಲಿ ಮಂತ್ರಿ- ಮಾಗಧರು, ಜನಪ್ರತಿನಿಧಿಗಳು, ಅಧಿಕಾರಿಗಳು ತಂಡ ತಂಡವಾಗಿ ಇಲ್ಲಿಗೆ ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದರು. ಇದೊಂದು ಫೋಟೋಶೂಟ್ ತಾಣವಾಗಿತ್ತು. ಯಡಿಯೂರಪ್ಪ, ಸಿದ್ದರಾಮಯ್ಯರಿಂದ ಹಿಡಿದು ಬಂದ ರಾಜಕಾರಣಿಗಳೆಲ್ಲ ಕಸದ ರಾಶಿಯನ್ನು ನೋಡಿ ಹಿಂತಿರುಗಿದ್ದೇ ಹೊರತು ಸಂತ್ರಸ್ತರ ಕಷ್ಟವನ್ನು ಆಲಿಸಲಿಲ್ಲ. ತ್ಯಾಜ್ಯ ದುರಂತ ನಡೆದಾಗ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಮುತುವರ್ಜಿಯಿಂದಲೇ ಕೆಲಸ ಮಾಡಿದ್ದರು. ಆದರೆ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಿದರು. ನಂತರ ಬಂದ ಸಿಂಧೂ ರೂಪೇಶ್ ಕೂಡು ಒಂದೆರಡು ಬಾರಿ ಸಂತ್ರಸ್ತರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದರು. ಅದೇ ವೇಳೆ ಪಾಲಿಕೆಯ ಉಪ ಆಯುಕ್ತೆಯಾಗಿದ್ದ ಗಾಯತ್ರಿ ನಾಯಕ್ ಅವರು ಸಂತ್ರಸ್ತರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಆದರೆ ನಂತರ ಬಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತ್ರ ಈ ಕಡೆ ಕಾಲು ಇಟ್ಟಿಲ್ಲ. ಪಾಲಿಕೆಯ ಹೊಸತಾಗಿ ಬಂದ ಕಮಿಷನರ್ ಅಕ್ಷಯ್ ಶ್ರೀಧರ್ ಅವರಿಗೂ ಬಡವರ ಕಣ್ಣೀರು ನೋಡಲು ಸಮಯವಿಲ್ಲ.
ಪಚ್ಚನಾಡಿ ಡಂಪಿಂಗ್ ಯಾರ್ಡ್ ದುರಂತ ಮಾನವ ನಿರ್ಮಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಂಪು ಕಲ್ಲಿನ ರಿಟೈನಿಂಗ್ ವಾಲ್ ನಿರ್ಮಿಸಿದ ಪರಿಣಾಮ ಈ ಘೋರ ದುರಂತ ಸಂಭವಿದೆ. ಇದೀಗ ಮಂದಾರ ಜನತೆ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post