ಮಂಗಳೂರು, ಜ.2: ‘ವಿಶ್ವ ಕೊಂಕಣಿ ಸರ್ದಾರ್’ ಎಂದೇ ಜನಪ್ರಿಯರಾಗಿದ್ದ, ಸಾಹಿತ್ಯ ಪೋಷಕ, ನಗರದ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಮಾಧವ ಶೆಣೈ(87) ರವಿವಾರ ತುಂಬೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವೆ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬಸ್ತಿ ವಾಮನ ಶೆಣೈ 1943ರ ನವೆಂಬರ್ 6ರಂದು ಬಂಟ್ವಾಳದಲ್ಲಿ ಜನಿಸಿದರು. ಮಂಗಳೂರಿನ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಉಳಿವು ಮತ್ತು ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿ ಗಮನ ಸೆಳೆದಿದ್ದರು.
ಬಸ್ತಿ ವಾಮನ ಶೆಣೈ 1994-95ರಲ್ಲಿ ಅವರ ಪ್ರಯತ್ನದಿಂದಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂತು. ಇನ್ನು ವಾಮನ್ ಶೆಣೈ ಅವರು 1995 ರಲ್ಲಿ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮಾವೇಶವನ್ನು ಆಯೋಜಿಸಿದ್ದು, ಅವರಿಗೆ ‘ವಿಶ್ವ ಕೊಂಕಣಿ ಸರ್ದಾರ್’ (ಕೊಂಕಣಿಯ ವಿಶ್ವ ನಾಯಕ) ಎಂಬ ಬಿರುದು ನೀಡಿ ಗೌರವಿಸಲಾಯಿತು.
ಮೃತರ ಅಂತ್ಯ ಸಂಸ್ಕಾರವು ಜ.3ರಂದು ಮಧ್ಯಾಹ್ನ 12 ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ನೆರವೇರಲಿದೆ. ಅದಕ್ಕೂ ಮೊದಲು ಬೆಳಗ್ಗೆ 9ರಿಂದ 10ರವರೆಗೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post