ಉಡುಪಿ: ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಕುಂದರ್ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ. ಡಿಎಆರ್ ಎಪಿಸಿಗಳಾದ ಉಮೇಶ್ ಹಾಗೂ ಅಶ್ಫಕ್, ಗಂಗೊಳ್ಳಿ ಠಾಣೆಯ ಪಿಎಸ್‌ಐ ನಂಜಪ್ಪ ತನ್ನ ಸಾವಿಗೆ ಕಾರಣ ಎಂದು ರಾಜೇಶ್ ಕುಂದರ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳ ವಿರುದ್ಧ 306 ಆರ್‌ಡಬ್ಲ್ಯು, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರಾಜೇಶ್ ಕುಂದರ್ ಜತೆ ‘ಆದಿ ಉಡುಪಿ ಶಾಲೆ’ಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್ ಘಟಕದ ಕಾನ್‌ಸ್ಟೇಬಲ್ ಗಣೇಶ್ ಶನಿವಾರ ಕರ್ತವ್ಯ ಮುಗಿಸಿಕೊಂಡು ಡಿಎಆರ್ ಮುಖ್ಯ ಕಚೇರಿಗೆ ಬಂದು ಕಿಟ್ ಬಾಕ್ಸ್ ಪರೀಶಿಲಿಸಿದ್ದಾರೆ. ಈ ಸಂದರ್ಭ ಬ್ಯಾಗ್‌ನಲ್ಲಿದ್ದ ಸಮವಸ್ತ್ರ ಹಾಗೂ ಬೆಡ್‌ಶೀಟ್ ಹೊರತೆಗೆದಾಗ ಡೆತ್‌ನೋಟ್ ಪತ್ತೆಯಾಗಿದೆ.
ತಿಂಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ನಡುವೆ ನಡೆದ ಗಲಾಟೆ ವಿಚಾರದಲ್ಲಿ ರಾಜೇಶ್ ಕುಂದರ್ ಅವರನ್ನು ಅಮಾನತು ಮಾಡಲಾಗಿತ್ತು. ಮೊನ್ನೆ ಎ.27 ರಂದು ಅಮಾನತು ಅವಧಿ ಪೂರೈಸಿ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಅಮಾನತು ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು. ಅದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಡೆತ್ ನೋಟ್ ನಲ್ಲಿರುವ ಮಾಹಿತಿಗಳು ಪ್ರಕರಣದ ತನಿಖೆಗೆ ದಿಕ್ಕು ತೋರಿದೆ. ಡೆತ್ ನೋಟ್ ನಲ್ಲಿ ಡಿಎಆರ್ ಎಸಿಪಿ ಉಮೇಶ್, ಅಶ್ಫಾಕ್ ಹಾಗೂ ಗಂಗೊಳ್ಳಿ ಠಾಣೆ ಪಿಎಸ್‌ಐ ನಂಜ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಮೂವರು ಪೊಲೀಸರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ ಗಣೇಶ್ ಡೆತ್‌ನೋಟ್ ಅನ್ನು ನಗರ ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಕರ್ತವ್ಯ ನಿರತರಾಗಿದ್ದ ಸಂದರ್ಭ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಕುಂದರ್ ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಾಗಿತ್ತು.