ಕಾರ್ಕಳ ಅ 02; ಕಾರ್ಕಳ ಸಮೀಪದ ನಿಟ್ಟೆ ಗ್ರಾಮ ಪರಪ್ಪಾಡಿ ಅರ್ಬಿ ಫಾಲ್ಸ್ ವೀಕ್ಷಣೆಗೆ ಸ್ನೇಹಿತರೊಂದಿಗೆ ತೆರಳಿದ ಕಾರ್ಕಳ ಕಾಲೇಜ್ ನ ವಿದ್ಯಾರ್ಥಿನಿ, ಮಂಗಳೂರು ಮೂಲದ ವರ್ಷಿತಾ (19) ನೀರುಪಾಲಾದ ಘಟನೆ ನಡೆದಿದೆ.
ಇಬ್ಬರು ವಿದ್ಯಾರ್ಥಿಗಳೊಂದಿಗೆ ಅರ್ಬಿ ಫಾಲ್ಸ್ ವೀಕ್ಷಿಸಲು ತೆರಳಿದ್ದ ವರ್ಷಿತಾ ಆಟವಾಡಲು ನದಿಗೆ ಇಳಿದಿದ್ದಾರೆ ಎನ್ನಲಾಗಿದ್ದು, ಆದರೆ ನೀರಿನ ಸುಳಿಗೆ ಸಿಕ್ಕಿ ನೀರುಪಾಲಾದರು ಎಂದು ತಿಳಿದುಬಂದಿದೆ. ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದ ವರ್ಷಿತಾ ಅವರಿಗೆ ಈಜು ಗೊತ್ತಿತ್ತಾದರೂ ನೀರಿನ ಸುಳಿಯಿಂದ ಮೇಲೆ ಬರಲಾಗದೇ ಮುಳುಗಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.