ಟೋಕಿಯೊ: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿದರು. ಇದರಿಂದ ಮುತ್ತಿನನಗರಿಯ ಹುಡುಗಿ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿಗೆ ಪದಕಕ್ಕೆ ಮುತ್ತಿಕ್ಕಿದರು. ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ಸಿಂಧು ನಿರೀಕ್ಷೆಯಂತೆಯೇ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು, ಇದೀಗ ಕಂಚಿನ ಪದಕದೊಂದಿಗೆ ತವರಿಗೆ ವಾಪಸಾಗಲಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಸತತ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಹಾಗೂ 2ನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದರಿಂದ ಕೂಟದಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ 2ಕ್ಕೇರಿದೆ. ಇದಕ್ಕೂ ಮೊದಲು ಮೀರಾಬಾಯಿ ಚಾನು, ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಜಯಿಸಿದ್ದರು.
ಮೊದಲ ಗೇಮ್‌ನಲ್ಲಿ ಆರಂಭದಲ್ಲೇ 4-0 ಯಿಂದ ಮುನ್ನಡೆ ಸಾಧಿಸಿದ 26 ವರ್ಷದ ಸಿಂಧುಗೆ ಚೀನಾ ಆಟಗಾರ್ತಿ ತಿರುಗೇಟು ನೀಡಲು ಯತ್ನಿಸಿದರು. ಇದರಿಂದ 6-6 ರಿಂದ ಸಮಬಲ ಕಂಡಿತು. ಹಿ ಬಿಂಗ್ ಜಿಯಾವೊ ತಿರುಗೇಟು ನೀಡಲು ಯತ್ನಿಸಿದರೂ ಮೊದಲ ಗೇಮ್‌ನ ವಿಶ್ರಾಂತಿ ವೇಳೆಗೆ 11-8 ರಿಂದ ಮುನ್ನಡೆ ಸಾಧಿಸಿದರು. ಬಳಿಕ ಸತತ 4 ಅಂಕ ಕಲೆಹಾಕಿದ ಸಿಂಧು, 15-9 ರಿಂದ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದರು. ಆಕರ್ಷಕ ಸ್ಮ್ಯಾಷ್‌ಗಳೊಂದಿಗೆ ಮೊದಲ ಗೇಮ್‌ನ್ನು 21-13 ರಿಂದ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲೂ ಅದೇ ಲಯ ಮುಂದುವರಿಸಿದ ಸಿಂಧು, ಆರಂಭಿಕ ಹಂತದಲ್ಲಿ 8-7 ರಿಂದ ಅಲ್ಪಮುನ್ನಡೆ ಕಂಡರೂ ಪಂದ್ಯ ಸಾಗುತ್ತಿದ್ದಂತೆ ಸತತವಾಗಿ ಅಂಕಗಳನ್ನು ಕಲೆಹಾಕಿದರು. ಸಿಂಧು ಆಕ್ರಮಣಕಾರಿ ನಿರ್ವಹಣೆಗೆ ಚೀನಾ ಆಟಗಾರ್ತಿ ತಲೆಬಾಗಿದರು. ಎರಡನೇ ಗೇಮ್‌ನ್ನು 21-15 ರಿಂದ ಸುಲಭವಾಗಿ ಒಲಿಸಿಕೊಂಡರು.
Discover more from Coastal Times Kannada
Subscribe to get the latest posts sent to your email.
Discussion about this post