ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ನಡುವೆ ದೇವಾಲಯದ ಸಮೀಪ ಕಾಡಾನೆಯೊಂದು ಕಾಣಿಸಿಕೊಂಡಿದೆ. ಕಾಡಾನೆಯನ್ನು ಕಾಡಿನ ಗಡಿ ಹತ್ತಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಯಶಸ್ವಿಯಾಗಿದ್ದಾರೆ.
ದೇವಾಲಯದ ಮಠದ ಬಳಿ ಕಾಡಾನೆ ಕಂಡುಬಂದಿದ್ದು, ಜನರು ಓಡಿಸಲು ಹರಸಾಹಸಪಟ್ಟರು. ಜಾತ್ರೆಯ ಬೆಳಕು, ಬ್ಯಾಂಡ್ ಸದ್ದಿಗೆ ಬೆದರಿದ ಆನೆ ಓಡಿದೆ. ಮತ್ತೆ ಕಂಡುಬಂದರೆ ದೇಗುಲದ ಆನೆ ಎಂದು ತಿಳಿದು ಅದಕ್ಕೆ ನಮಸ್ಕರಿಸಲು ಭಕ್ತರು ಮುಂದಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಪುತ್ತೂರು ಉಪ ಆಯುಕ್ತರು ಮತ್ತು ದೇಗುಲದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಭಕ್ತರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಆನೆ ಓಡಾಡಿರುವ ದೃಶ್ಯಗಳನ್ನು ಕೆಲವರು ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದು, ಸಿಸಿಟಿವಿಯಲ್ಲೂ ಚಲನವಲನ ದಾಖಲಾಗಿದೆ.
ಚಂಪಾಷಷ್ಠಿ: ಡಿ.7ರಂದು ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿ.2ರಂದು ಅಶ್ವವಾಹನೋತ್ಸವ, ಡಿ.3ರಂದು ಮಯೂರ ವಾಹನೋತ್ಸವ, ಡಿ.4ರಂದು ಶೇಷ ವಾಹನೋತ್ಸವ, ಡಿ.5ರಂದು ಚೌತಿ ಹೂವಿನ ತೇರಿನ ಉತ್ಸವ, ಡಿ.6ರಂದು ಮಾರ್ಗಶಿರ ಶುದ್ಧ ಪಂಚಮಿ ತೈಲಾಭ್ಯಂಜನ ದಿನ. ಅಂದೇ ರಾತ್ರಿ ಪಂಚಮಿ ರಥೋತ್ಸವ ನೆರವೇರಲಿದೆ. ಡಿ.7ರಂದು ಮಾರ್ಗಶಿರ ಶುದ್ಧ ಷಷ್ಠಿ ಬೆಳಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿ.8ರಂದು ಅವಭ್ರತೋತ್ಸವ ಮತ್ತು ನೌಕವಿಹಾರ, ಡಿ.12ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೋತ್ಸವ ಸಮಾಪನಗೊಳ್ಳಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post