ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರದ ರಥಬೀದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಕಾರ್ಯಕ್ರಮದಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಇದುವರಿಗೆ 16 ಲಕ್ಷ ಮಂದಿಗೆ ಮೊದಲ ಡೋಸ್ ಸಂಪೂರ್ಣವಾಗಿದ್ದು, ಶೇ.94ರಷ್ಟು ಸಾಧನೆ ಮಾಡಲಾಗಿದೆ. ಶೇ.80ರಷ್ಟು ಮಂದಿ ಎರಡನೇ ಡೋಸ್ ಕೂಡಾ ಪಡೆದಿದ್ದಾರೆ. ಇಲ್ಲಿಯವರೆಗೆ ಯಾರಿಗೂ ವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಕಂಡುಬಂದಿಲ್ಲ. 1 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದು, ವಿದ್ಯಾರ್ಥಿಗಳು 10 ಮನೆಗಳ ಜವಾಬ್ದಾರಿ ತೆಗೆದುಕೊಂಡು ವ್ಯಾಕ್ಸಿನೇಶನ್ ಹಾಕಿಸುವ ಮೂಲಕ ಜಿಲ್ಲಾಡಳಿತದ ಏಜೆಂಟ್ ಆಗಿ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್, ಜೀವ ರಕ್ಷಣೆಯ ಕೆಲಸ ಸರಕಾರ, ಜಿಲ್ಲಾಡಳಿತ ಮಾಡುವಾಗ ಅದಕ್ಕೆ ಸಹಕಾರ ನೀಡುವುದೂ ಸಾರ್ವಜನಿಕರ ಕರ್ತವ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯುವ ನಿಟ್ಟಿನಲ್ಲಿ ಉಪನ್ಯಾಸಕರು ಗಮನ ಹರಿಸಬೇಕು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಕಾರ್ಪೋರೇಟರ್ ಗಳಾದ ಜೀನತ್ ಸಂಶುದ್ದೀನ, ಪೂರ್ಣಿಮಾ, ದಿವಾಕರ್ ಪಾಂಡೇಶ್ವರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಆರ್ ಸಿ ಎಚ್ ಅಧಿಕಾರಿ ಡಾ. ರಾಜೇಶ್, ಡಿಡಿಪಿಯು ಸಿ.ಡಿ.ಜಯಣ್ಣ, ಕೆ.ಸುಧಾಕರ್, ಡಾ. ಅಣ್ಣಯ್ಯ ಕುಲಾಲ್, ಪ್ರಾಂಶುಪಾಲೆ ಭಾರತಿ ಬಾಯಿ ಮೊದಲಾದವರಿದ್ದರು. ಜಿಲ್ಲೆಯಲ್ಲಿ 1.03 ಲಕ್ಷ ಮಕ್ಕಳನ್ನು ಗುರುತಿಸಲಾಗಿದ್ದು, 25 ಸಾವಿರ ಮಂದಿಗೆ ಮೊದಲ ದಿನವೇ ಲಸಿಕೆ ನೀಡುವ ಗುರಿ ಹೊಂದಲಾಗಿದೆ.