ಉಳ್ಳಾಲ, ಮಾ.3: ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ದಕ್ಷಿಣ ಕನ್ನಡಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣದಲ್ಲಿ ನಡೆದಿದೆ. ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಲಾಗಿದೆ. ದೈವಸ್ಥಾನದ ಆಡಳಿತ ಮಂಡಳಿ ವಿಚಾರವಾಗಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ಕೊಂಡಾಣ ದೇವಸ್ಥಾನದ ಭಂಡಾರ ಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಸೇರಿದಂತೆ ಹಲವರು ಯತ್ನಿಸಿದ್ದರು. ಆದರೆ ಇದಕ್ಕೆ ಖಾಸಗಿ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ. ಅಲ್ಲದೆ, ಸಮಿತಿಯು ದೈವಗಳಿಗೆ ಬೇರೆ ಭಂಡಾರ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ದೇಗುಲದ ಪಕ್ಕದ ಜಾಗದಲ್ಲಿ ಜನವರಿ 8 ರಂದು ಕೃಷ್ಣ ಶೆಟ್ಟಿ ನೇತ್ವತ್ವದಲ್ಲಿ ಭಂಡಾರ ಮನೆಯ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಕಾಮಗಾರಿ ಪೂರ್ಣಗೊಂಡಿತ್ತು. ಈ ಮಧ್ಯೆ ಸಮಿತಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಅವರು ಎರಡು ದಿನದ ಹಿಂದಷ್ಟೇ ಅಧಿಕಾರ ಹಸ್ತಾಂತರಿಸಿದ್ದರು. ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಭಂಡಾರ ಮನೆ ಧ್ವಂಸಗೊಂಡಿದೆ.
ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆ ನೆಲಸಮಗೊಳಿಸಲಾಗಿದ್ದು, ಕಾರ್ಣಿಕ ದೈವದ ಕೋಟ್ಯಂತರ ರೂ.ಪಾಯಿ ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಇದಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಒಡವೆಗಳಿದ್ದು, ಘಟನೆ ಸಂಬಂಧ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನಂದ್ ಅವರು ಠಾಣೆಗೆ ದೂರು ನೀಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರ ಜೊತೆಗೆ ಎರಡು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಕ್ಷೇತ್ರದ ಭಕ್ತರಾದ ಕೆ.ಪಿ ಸುರೇಶ್ ಮಾತನಾಡಿ ಭಂಡಾರ ಮನೆ ಒಡೆಯಲು ಗುರಿಕಾರರಾದ ಮುತ್ತಣ್ಣ ಶೆಟ್ಟಿಯೇ ಕಾರಣ ಎಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ಕಾನೂನು ಪ್ರಕಾರವಾಗಿಯೇ ಭಂಡಾರ ಮನೆ ನಿರ್ಮಿಸಲಾಗಿತ್ತು. ಅದಕ್ಕೆ ಸದಾ ವಿರುದ್ಧವಾಗಿ ಕೋರ್ಟಿನಲ್ಲಿ ದಾವೆ ಹೂಡುತ್ತಿದ್ದದ್ದು ಮುತ್ತಣ್ಣ ಶೆಟ್ಟಿಯೇ ಆಗಿದ್ದು ಅವರ ಚೇಲಾಗಳೇ ಈ ದುಷ್ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಕ್ಷೇತ್ರವನ್ನ ದೋಚುವ ಗುರಿಕಾರರ ಅಗತ್ಯತೆ ಇಲ್ಲ. ಇಲ್ಲಿ ಮತ್ತೆ ಭಂಡಾರಮನೆ ಪುನರ್ ನಿರ್ಮಾಣ ಆಗಲೇ ಬೇಕು. ಆ ಮೂಲಕ ದೈವಗಳ ಕೋಟಿಗಟ್ಟಲೆ ಬೆಲೆ ಬಾಳುವ ಒಡವೆಗಳನ್ನ ಸೇಫ್ ಲಾಕರಲ್ಲಿ ಇಡುವಂತಾಗಬೇಕೆಂದರು.
Discover more from Coastal Times Kannada
Subscribe to get the latest posts sent to your email.
Discussion about this post